BELTHANGADI
ಚಾರ್ಮಾಡಿ ಘಾಟ್ ನಲ್ಲಿ ಅಫಘಾತ: ನೂರು ಅಡಿ ಪ್ರಪಾತಕ್ಕೆ ಬಿದ್ದ ಕಾರು!

ಬೆಳ್ತಂಗಡಿ , ಎಪ್ರಿಲ್ 10: ಚಾರ್ಮಾಡಿ ಘಾಟ್ ನಲ್ಲಿ ನಿನ್ನೆ ತಡರಾತ್ರಿ ಅಫಘಾತ ಸಂಭವಿಸಿದ್ದು, ಕಾರು ನೂರು ಅಡಿ ಪ್ರಪಾತಕ್ಕೆ ಬಿದ್ದ ಘಟನೆ ನಡೆದಿದೆ.
ನಿನ್ನೆ ತಡರಾತ್ರಿ ಚಾರ್ಮಾಡಿ ಘಾಟ್ ನ ಎರಡನೇ ತಿರುವಿನಲ್ಲಿ ಅಫಘಾತ ಸಂಭವಿಸಿದ್ದು, ಉಜಿರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ಹಾಗೂ ಕುಟುಂಬಸ್ಥರು ಶೃಂಗೇರಿಯ ಕೊಪ್ಪ ಎಂಬಲ್ಲಿ ಮರಣದ ಕಾರ್ಯಕ್ರಮಕ್ಕೆ ಹೋಗಿ ಮರಳುತ್ತಿದ್ದ ವೇಳೆ ರವಿವಾರ ರಾತ್ರಿ ಈ ಅವಘಡ ನಡೆದಿತ್ತು.

ಕಾರಿನಲ್ಲಿ ಪ್ರಯಣಿಸುತ್ತಿದ್ದ ಪುಷ್ಪಾವತಿ ಆರ್.ಶೆಟ್ಟಿ, ಪುತ್ರಿ ಪೂರ್ಣಿಮಾ ಶೆಟ್ಟಿ, ಮೊಮ್ಮಗ ಸಮೃದ್ಧ್, ಸಾಕ್ಷಿ, ಸಂಬಂಧಿಕ ಮಹಿಳೆ ಸರೋಜಿನಿ ಶೆಟ್ಟಿ ಹಾಗೂ ಕಾರು ಚಾಲಕರಾಗಿದ್ದ ಅರುಣ್ ಗಾಯಗೊಂಡಿದ್ದರು. ಎಲ್ಲಾ ಗಾಯಾಳುಗಳನ್ನು ತಕ್ಷಣವೇ ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆ, ಉಜಿರೆಯ ಎಸ್‌ಡಿಎಂ ಆಸ್ಪತ್ರೆ ಮತ್ತು ಬೆನಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಈ ಪೈಕಿ ಸರೋಜಿನಿ ಶೆಟ್ಟಿ ಮತ್ತು ಪೂರ್ಣಿಮಾ ಶೆಟ್ಟಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಳಿದವರು ಉಜಿರೆ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದಾರೆ.
ಸರೋಜಿನಿ ಶೆಟ್ಟಿ (64) ಅವರು ಮಂಗಳೂರಿಗೆ ಕರೆದೊಯ್ಯುವ ವೇಳೆಯೇ ದಾರಿ ಮಧ್ಯೆಯೇ ತೀವ್ರವಾಗಿ ಬಳಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಉಜಿರೆ ಗ್ರಾಮಪಂಚಾಯತ್ ಅಧ್ಯಕ್ಷೆ ಪುಷ್ಟಾವತಿ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.