KARNATAKA
ಬ್ಲ್ಯಾಕ್‌ಮೇಲ್ ಮಾಡಿ ಹಲವು ಬಾರಿ ಯುವತಿ ಮೇಲೆ ಅತ್ಯಾಚಾರ: ನೃತ್ಯ ಶಿಕ್ಷಕ ಸೇರಿ ಮೂವರ ಬಂಧನ
ಬೆಂಗಳೂರು, ಆಗಸ್ಟ್ 02 : ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಆರೋಪದಡಿ ನೃತ್ಯ ಶಿಕ್ಷಕ ಸೇರಿ ಮೂವರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ನೃತ್ಯ ಶಿಕ್ಷಕ ಆ್ಯಂಡಿ ಜಾರ್ಜ್ ಅಲಿಯಾಸ್ ಹಾಂಕ್ಲೆ ಹಾಗೂ ಸ್ನೇಹಿತರಾದ ಸಂತೋಷ್, ಶಶಿ ಬಂಧಿತರು. ಮೂವರು ಸೇರಿಕೊಂಡು ಯುವತಿ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ. ಜುಲೈ 19ರಂದು ಯುವತಿ ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಮೂವರು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಆರೋಪಿ ಜಾರ್ಜ್, ಹಲವು ಶಾಲೆಗಳಿಗೆ ಆಗಾಗ ಹೋಗಿ ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದ. ಇತರೆ ಆರೋಪಿಗಳು, ಸಣ್ಣ–ಪುಟ್ಟ ಕೆಲಸ ಮಾಡಿಕೊಂಡಿದ್ದಾರೆ. ಮೂವರು ಹಲವು ವರ್ಷಗಳ ಸ್ನೇಹಿತರಾಗಿದ್ದು, ಆಗಾಗ ಒಟ್ಟಿಗೆ ಸುತ್ತಾಡುತ್ತಿದ್ದರು’ ಎಂದು ತಿಳಿಸಿದರು.
ಆ್ಯಪ್ ಸ್ನೇಹ: ‘ಸಂತ್ರಸ್ತ ಯುವತಿ, ಸಾಮಾಜಿಕ ಮಾಧ್ಯಮದ ಆ್ಯಪ್‌ವೊಂದರಲ್ಲಿ ಖಾತೆ ತೆರೆದಿದ್ದರು. ನಾಲ್ಕು ವರ್ಷಗಳ ಹಿಂದೆ ಯುವತಿಗೆ ಆ್ಯಪ್ ಮೂಲಕ ಆರೋಪಿ ಜಾರ್ಜ್ ಪರಿಚಯವಾಗಿತ್ತು. ಇದಾದ ನಂತರ, ಇಬ್ಬರೂ ಪರಸ್ಪರ ಸಂದೇಶ ಕಳುಹಿಸಲಾರಂಭಿಸಿದ್ದರು’ ಎಂದು ಪೊಲೀಸರು ಹೇಳಿದರು.
‘ಯುವತಿ ಹಾಗೂ ಆರೋಪಿ, ಮೊಬೈಲ್ ನಂಬರ್ ಸಹ ಬದಲಾಯಿಸಿಕೊಂಡಿದ್ದರು. ಆಗಾಗ ಭೇಟಿಯಾಗುತ್ತಿದ್ದ ಇಬ್ಬರು, ಪರಸ್ಪರ ಪ್ರೀತಿಸಲಾರಂಭಿಸಿದ್ದರು. ಇದೇ ವೇಳೆಯೇ ಆರೋಪಿ, ಯುವತಿ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದ. ಅದರ ವಿಡಿಯೊ ಚಿತ್ರೀಕರಿಸಿಟ್ಟುಕೊಂಡಿದ್ದ’ ಎಂದು ತಿಳಿಸಿದರು.
ವಿಡಿಯೊ ತೋರಿಸಿ ಅತ್ಯಾಚಾರ: ‘ವರ್ಷದ ಹಿಂದೆಯೆಷ್ಟೇ ಆರೋಪಿ ಯುವತಿಗೆ ವಿಪರೀತ ಕಿರುಕುಳ ನೀಡಲಾರಂಭಿಸಿದ್ದ. ಬೇಸತ್ತ ಯುವತಿ, ಆರೋಪಿ ಜೊತೆ ಮಾತನಾಡುವುದನ್ನು ಬಿಟ್ಟು ದೂರವಾಗಿದ್ದರು’ ಎಂದು ಪೊಲೀಸರು ಹೇಳಿದರು.
‘ಯುವತಿ ಹಿಂದೆ ಬಿದ್ದಿದ್ದ ಆರೋಪಿ, ‘ನನ್ನ ಜೊತೆ ಲೈಂಗಿಕವಾಗಿ ಸಹಕರಿಸಬೇಕು. ಇಲ್ಲದಿದ್ದರೆ, ಖಾಸಗಿ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತೇನೆ’ ಎಂಬುದಾಗಿ ಬೆದರಿಸಿದ್ದ. ಮರ್ಯಾದೆಗೆ ಹೆದರಿದ್ದ ಯುವತಿ, ಆರೋಪಿ ಹೇಳಿದ ಸ್ಥಳಕ್ಕೆ ಹೋಗುತ್ತಿದ್ದರು. ಅದೇ ಸಂದರ್ಭದಲ್ಲಿ ಆರೋಪಿ ಅತ್ಯಾಚಾರ ಎಸಗಿದ್ದ’ ಎಂದು ತಿಳಿಸಿದರು.
ಸ್ನೇಹಿತರಿಂದಲೂ ಅತ್ಯಾಚಾರ: ‘ಆರೋಪಿ ಜಾರ್ಜ್ ಬಳಿಯ ವಿಡಿಯೊಗಳನ್ನು ಸ್ನೇಹಿತರಾದ ಸಂತೋಷ್ ಹಾಗೂ ಶಶಿ ಪಡೆದುಕೊಂಡಿದ್ದರು. ಅದೇ ವಿಡಿಯೊಗಳನ್ನು ಯುವತಿ ಮೊಬೈಲ್‌ಗೆ ಕಳುಹಿಸಿದ್ದ ಅವರಿಬ್ಬರು, ‘ನಾವು ಕರೆದ ಕಡೆ ಬರಬೇಕು. ಇಲ್ಲದಿದ್ದರೆ, ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುತ್ತೇವೆ’ ಎಂಬುದಾಗಿ ಬೆದರಿಸಿದ್ದರು’ ಎಂದು ಪೊಲೀಸರು ಹೇಳಿದರು.
‘ಹೆದರಿದ್ದ ಯುವತಿ, ಇಬ್ಬರು ಆರೋಪಿಗಳು ಹೇಳಿದ ಸ್ಥಳಕ್ಕೆ ಹೋಗಿದ್ದರು. ಅದೇ ಸಂದರ್ಭದಲ್ಲಿ ಆರೋಪಿಗಳು, ಯುವತಿ ಮೇಲೆ ಅತ್ಯಾಚಾರ ಎಸಗಿದ್ದರು. ಮೂವರು ಆರೋಪಿಗಳು, ಪದೇ ಪದೇ ಯುವತಿಗೆ ಕರೆ ಮಾಡಿ ತಾವು ಹೇಳಿದ ಸ್ಥಳಕ್ಕೆ ಬರುವಂತೆ ಒತ್ತಾಯಿಸುತ್ತಿದ್ದರು. ಬೇಸತ್ತ ಯುವತಿ, ಪೋಷಕರಿಗೆ ವಿಷಯ ತಿಳಿಸಿದ್ದರು. ನಂತರವೇ ಠಾಣೆಗೆ ಬಂದು ದೂರು ನೀಡಿದ್ದರು’ ಎಂದು ತಿಳಿಸಿದರು.
‘ಆರೋಪಿಗಳ ಮೊಬೈಲ್, ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ. ಸಾಕಷ್ಟು ವಿಡಿಯೊಗಳು ಸಿಕ್ಕಿವೆ. ಆರೋಪಿಗಳು ಕೆಲ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಅಪ್‌ಲೋಡ್ ಮಾಡಿದ್ದು, ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ’ ಎಂದು ಪೊಲೀಸರು ಹೇಳಿದರು.