ನವದೆಹಲಿ, ಮಾರ್ಚ್ 09: ಯುದ್ಧಪೀಡಿತ ಉಕ್ರೇನ್ ದೇಶದಿಂದ ಆಪರೇಶನ್ ಗಂಗಾ ಕಾರ್ಯಾಚರಣೆ ಮೂಲಕ ಸಾವಿರಾರು ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಈ ನಡುವೆ ಕೀವ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸಹಾಯದಿಂದ ಪಾಕಿಸ್ತಾನಿ ಹುಡುಗಿ ಅಸ್ಮಾ ಶಫೀಕ್ ಎಂಬ ವಿದ್ಯಾರ್ಥಿನಿಯನ್ನು ಉಕ್ರೇನ್‌ನ ಯುದ್ಧ ವಲಯದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ವೀಡಿಯೊವೊಂದರಲ್ಲಿ, ಅವರು ‘ಬಹಳ ಕಷ್ಟಕರ ಪರಿಸ್ಥಿತಿ’ ಯಿಂದ ಪಾರಾಗಲು ಸಹಾಯ ಮಾಡಿದ್ದಕ್ಕಾಗಿ ಭಾರತೀಯ ರಾಯಭಾರ ಕಚೇರಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ. ‘ನಾವು ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿರುವಾಗ ಇಲ್ಲಿ ಎಲ್ಲಾ ರೀತಿಯಲ್ಲಿ ನಮಗೆ ಬೆಂಬಲ ನೀಡಿದ ಕೀವ್ ನಲ್ಲಿರುವ ಭಾರತದ ರಾಯಭಾರ ಕಚೇರಿಗೆ ನಾನು ತುಂಬಾ ಕೃತಜ್ಞಳಾಗಿದ್ದೇನೆ’ ಎಂದು ಅಸ್ಮಾ ಶಫೀಕ್ ಹೇಳಿದ್ದಾರೆ.
‘ನಾನು ಭಾರತದ ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಹೇಳುತ್ತಿದ್ದೇನೆ. ನಾವು ಸುರಕ್ಷಿತವಾಗಿ ಮನೆಗೆ ಹೋಗುತ್ತೇವೆ ಎಂಬ ವಿಶ್ವಾಸದಲ್ಲಿದ್ದೇವೆ, ಭಾರತೀಯ ರಾಯಭಾರ ಕಚೇರಿಗೆ ಧನ್ಯವಾದಗಳು’ ಎಂದು ಅವರು ಎಎನ್‌ಐ ಸುದ್ದಿ ಸಂಸ್ಥೆ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
ಅಸ್ಮಾ ಶಫೀಕ್ ಅವರು ಈಗ ಪಶ್ಚಿಮ ಉಕ್ರೇನ್ ಗೆ ಹೋಗುತ್ತಿದ್ದಾರೆ, ಅಲ್ಲಿಂದ ಅವರು ಗಡಿ ದಾಟಿ ಉಕ್ರೇನ್ ನಿಂದ ಹೊರಬರುತ್ತಾರೆ. ಆಕೆ ಶೀಘ್ರದಲ್ಲೇ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಕೊಳ್ಳುತ್ತಾಳೆ ಎಂದು ಮೂಲಗಳನ್ನು ಉಲ್ಲೇಖಿಸಿದೆ.