LATEST NEWS
ಗೂಗಲ್ ಮ್ಯಾಪ್ ನಂಬಿ ಕಂದಕಕ್ಕೆ ಬಿದ್ದ ಆಡಿ ಕಾರು

ಮುಂಬೈ ಜುಲೈ 27: ಗೂಗಲ್ ಮ್ಯಾಪ್ ನಂಬಿ ಕಾರು ಚಲಾಯಿಸಿದ ಮಹಿಳೆಯೊಬ್ಬರ ಕಾರು ಸೀದಾ ಕಂದಕಕ್ಕೆ ಬಿದ್ದ ಘಟನೆ ಮುಂಬೈನಲ್ಲಿ ನಡೆದಿದೆ.
ಮಹಾರಾಷ್ಟ್ರದ ನವಿ ಮುಂಬೈ ಟೌನ್‌ಶಿಪ್‌ನ ಬೇಲಾಪುರ ಪ್ರದೇಶದಲ್ಲಿ ಶುಕ್ರವಾರ ನಸುಕಿನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗೂಗಲ್ ಮ್ಯಾಪ್ ನೆರವಿನಿಂದ ತೋರಿಸಿದ ದಾರಿಯಲ್ಲಿ ಸಾಗಿ ತಪ್ಪಾಗಿ ಏಕಾಏಕಿ ತಿರುವು ಪಡೆದುಕೊಂಡ ಕಾರು ಕಾರು ಸೇತುವೆಯಿಂದ ನದಿಗೆ ಉರುಳಿದೆ. ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಕಡಲ ಭದ್ರತಾ ತಂಡದಿಂದ ನೆರವಿನಿಂದ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿದ್ದಾರೆ ಎಂದು ಬೇಲಾಪುರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ನೀರಿನಲ್ಲಿ ತೇಲುತ್ತಿದ್ದ ಮಹಿಳೆಯನ್ನು ರಕ್ಷಿಸಲಾಗಿದೆ. ಆಕೆ ಸುರಕ್ಷಿತವಾಗಿದ್ದು, ಕ್ರೇನ್ ಮೂಲಕ ಕಾರನ್ನು ಹಳ್ಳದಿಂದ ಹೊರತೆಗೆಯಲಾಗಿದೆಎಂದು ಪೊಲೀಸರು ತಿಳಿಸಿದ್ದಾರೆ.
ನವಿ ಮುಂಬೈನ ಖಾರ್ಘರ್ ಪ್ರದೇಶದಲ್ಲಿ ಸಲೂನ್ ವ್ಯವಹಾರ ನಡೆಸುತ್ತಿರುವ ಮಹಿಳೆ ತನ್ನ ಕಾರಿನಲ್ಲಿ ಬೇಲಾಪುರದಿಂದ ಉಲ್ವೆ ಮನೆಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.