LATEST NEWS
ರಸ್ತೆ ಗಲಾಟೆ – ಮಹಿಳೆ ಮೇಲೆ ಪಂಚಾಯತ್ ಸದಸ್ಯನಿಂದ ಹಲ್ಲೆ….!!

ಉಡುಪಿ ಸೆಪ್ಟೆಂಬರ್ 06: ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಗ್ರಾಮಪಂಚಾಯತ್ ಸದಸ್ಯ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಉಡುಪಿಯ ಆತ್ರಾಡಿಯಲ್ಲಿ ನಡೆದಿದೆ.
ಆರತಿಯವರ ಪಟ್ಟಾ ಜಾಗದಲ್ಲಿ ವಿರೋಧದ ನಡುವೆಯೂ ಆತ್ರಾಡಿ ಗ್ರಾಮ ಪಂಚಾಯಿತಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ತಯಾರು ನಡೆಸಿತ್ತು. ಇದಕ್ಕೆ ಮನೆಯವರ ಆಕ್ಷೇಪ ಇದ್ದರೂ ರಸ್ತೆ ಕಾಮಗಾರಿ ಪ್ರಾರಂಭಿಸಿದ್ದನ್ನು ಆರತಿ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಸ್ಥಳದಲ್ಲಿದ್ದ ಪಂಚಾಯಿತಿ ಸದಸ್ಯ ರತ್ನಾಕರ್ ಶೆಟ್ಟಿ ತಳ್ಳಿದ್ದಾರೆ. ಆರತಿ ತನ್ನ ಚಪ್ಪಲಿ ತೆಗೆದು ರತ್ನಾಕರ್ ಶೆಟ್ಟಿ ಮತ್ತು ಪಕ್ಕದಲ್ಲಿದ್ದವರ ಮೇಲೆ ಹಲ್ಲೆ ಮಾಡಿದ್ದಾರೆ.

ಕೋಪಗೊಂಡ ಚಂದ್ರಹಾಸ್ ಶೆಟ್ಟಿ ಹಾಗೂ ಸಂತೋಷ್ ಪೂಜಾರಿ ಆರತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ವಾಗ್ವಾದದ ಸಂದರ್ಭ ರತ್ನಾಕರ್ ಶೆಟ್ಟಿ ಛತ್ರಿಯ ಹಿಡಿಯಲ್ಲಿ ಹೊಡೆದು ಆರತಿಯವರನ್ನು ತಳ್ಳಿದ ಪರಿಣಾಮ ಅವರ ತಲೆಗೆ ಗಂಭೀರ ಗಾಯವಾಗಿದೆ. ಗಲಾಟೆಯನ್ನು ತಡೆಯಲು ಬಂದ ಆರತಿ ಅವರ ಮಗಳ ಮೇಲೂ ಹಲ್ಲೆ ನಡೆಸಲಾಗಿದೆ.
ಇದೀಗ ಆರತಿ ಅವರು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ರತ್ನಾಕರ್ ಶೆಟ್ಟಿ ಮತ್ತು ತಂಡ ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಕೊಡಬೇಕಾಗಿದೆ.