DAKSHINA KANNADA
ಕರಾವಳಿಯಲ್ಲಿ ಮಳೆಯಬ್ಬರಕ್ಕೆ ಮಹಿಳೆ ಸೇರಿ ಮತ್ತೆರಡು ಬಲಿ,ದಕ್ಷಿಣ ಕನ್ನಡದಲ್ಲಿ ಕೊಂಚ ವಿರಾಮ
ಉಡುಪಿ : ಕರಾವಳಿ ಜಿಲ್ಲೆಗಳಲ್ಲಿ ಶುಕ್ರವಾರದಂದು ಮಳೆ ಅಬ್ಬರ ಕೊಂಚ ತಗ್ಗಿದ್ದರೂ ಮತ್ತೆ ನಾಲ್ಕು ದಿನ ಭಾರಿ ಮಳೆಯ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ಉಡುಪಿಯಲ್ಲಿ ಈಗಾಲೇ ವ್ಯಾಪಕ ಆಸ್ತಿಪಾಸ್ತಿ ನಷ್ಟ ಮಾಡಿದ ಮಳೆಗೆ ಮೊದಲ ಬಲಿಯಾಗಿದೆ.
ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ಸೊಸೈಟಿ ಗುಡ್ಡ ಎಂಬಲ್ಲಿ ಗುಡ್ಡ ಕುಸಿದು ಹಳ್ಳಿಬೇರು ನಿವಾಸಿ ಅಂಬಾ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಗುರುವಾರ ಸಂಜೆ ಸುಮಾರು ನಾಲ್ಕು ಗಂಟೆಗೆ ದುರ್ಘಟನೆ ನಡೆದಿದ್ದು, ಮೃತಪಟ್ಟ ಮಹಿಳೆಯನ್ನು ಹಳ್ಳಿಬೇರು ನಿವಾಸಿ ಕುಡುಬಿ ಮಹಿಳೆ ಅಂಬಾ (45) ಎಂದು ಗುರುತಿಸಲಾಗಿದೆ.ಕೊಲ್ಲೂರಿನ ದಳಿ ಎಂಬಲ್ಲಿ ವಿಶ್ವನಾಥ ಅಡಿಗ ಎಂಬವರ ಮನೆ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ ಮನೆಯ ಹಿಂಬಾಗದಲ್ಲಿ ಪಾತ್ರೆ ತೊಳೆಯುತ್ತಿದ್ದ ಅಂಬಾ ಸಾವನ್ನಪ್ಪಿದ್ದಾರೆ. ಮನೆಗೂ ಹಾನಿಯಾಗಿದ್ದು ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರಿ ಮಳೆಯ ಕಾರಣ ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಬ್ರಹ್ಮಾವರ ತಾಲೂಕಿನ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಪದವಿ, ಸ್ನಾತಕೋತ್ತರ ಪದವಿ, ಐಟಿಐ, ಇಂಜಿನಿಯರಿಂಗ್ ಮುಂತಾದ ವಿದ್ಯಾರ್ಥಿಗಳಿಗೆ ರಜೆ ಇರುವುದಿಲ್ಲ ಎಂದು ಕುಂದಾಪುರ ಉಪ ವಿಭಾಗ ಸಹಾಯಕ ಆಯುಕ್ತೆ ರಶ್ಮಿ ಆದೇಶ ಹೊರಡಿಸಿದ್ದಾರೆ.
ದಕ್ಷಿಣ ಕನ್ನಡದ ಬಂಟ್ವಾಳದ ಅಜಿಲಮೊಗರು ಸಮೀಪದ ಕೂಟೇಲು ಸೇತುವೆಯ ಬಳಿ ನದಿಗೆ ಮೀನು ಹಿಡಿಯಲು ಹೋದ ಮೈಕಲ್ ಎಂಬವರು ನೀರು ಪಾಲಾಗಿದ್ದಾರೆ.
ಅದೇ ರೀತಿ ಮಲೆನಾಡಿನಲ್ಲಿ ವರುಣನ ಆರ್ಭ ಮುಂದುವರೆದಿದ್ದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬೈಸೆ ಗ್ರಾಮದಲ್ಲಿ ಗದ್ದೆಗೆ ಹೋಗುತ್ತಿದ್ದ ಮಹಿಳೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ತಿಂಗಳಿನಿಂದ ಸುರಿದ ಮಳೆಗೆ ಓರ್ವ ಮಹಿಳೆ ಮತ್ತು ಜಾನುವಾರು ಸಾವನ್ನಪ್ಪಿವೆ. 92 ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾಹಿತಿ ನೀಡಿದ್ದಾರೆ. ಕುಮಟಾ, ಭಟ್ಕಳ, ಹೊನ್ನಾವರ ತಾಲೂಕಿನ ಶಾಲಾ ಕಾಲೇಜಿಗೆ ಇಂದು ರಜೆ ಘೋಷಿಸಲಾಗಿದೆ.