DAKSHINA KANNADA
ಕರ್ನಾಟಕ ಕೇರಳ ಗಡಿ ಬಂದ್ ನಿಂದಾಗಿ ಸಂಪರ್ಕ ಕಳೆದುಕೊಂಡ ಗ್ರಾಮ
ಕರ್ನಾಟಕ ಕೇರಳ ಗಡಿ ಬಂದ್ ನಿಂದಾಗಿ ಸಂಪರ್ಕ ಕಳೆದುಕೊಂಡ ಗ್ರಾಮ
ಪುತ್ತೂರು : ಕೊರೊನಾ ಲಾಕ್ ಡೌನ್ ನಿಂದಾಗಿ ಗ್ರಾಮವೊಂದು ಕಳೆದ ಎರಡು ತಿಂಗಳಿನಿಂದ ತನ್ನ ಎಲ್ಲಾ ಸಂಪರ್ಕವನ್ನು ಕಳೆದುಕೊಂಡಿದೆ. ಕರ್ನಾಟಕ-ಕೇರಳ ಗಡಿಭಾಗದ ಈ ಗ್ರಾಮ ಭೌಗೋಳಿಕವಾಗಿ ಕೇರಳ ರಾಜ್ಯದಲ್ಲಿದ್ದರೂ, ಇಲ್ಲಿರುವ ಬಹುತೇಕ ಕುಟುಂಬಗಳು ಕನ್ನಡಿಗರು. ಈ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕರ್ನಾಟಕದ್ದಾಗಿದ್ದು, ಇದೀಗ ಲಾಕ್ ಡೌನ್ ನಿಂದಾಗಿ ಕೇರಳಕ್ಕೆ ಸಂಪರ್ಕಿಸುವ ರಸ್ತೆಯನ್ನು ಕರ್ನಾಟಕ ಸರಕಾರ ಬಂದ್ ಮಾಡಿರುವ ಹಿನ್ನಲೆಯಲ್ಲಿ ಈ ಕುಟುಂಬಗಳು ಪರದಾಡುವಂತಹ ಸ್ಥಿತಿಯಲ್ಲಿದೆ.
ಹಾನಿಗೊಳಗಾದ ವಿದ್ಯುತ್ ಲೈನ್ ಗಳ ದುರಸ್ತಿಗೆ ಲೈನ್ ಮೆನ್ ಗಳು ಗಡಿ ದಾಟುವಂತಿಲ್ಲ. ಹಾಲಿನ ಡೈರಿಗೆ ಹಾಲು ಸಾಗಿಸಬೇಕಾದರೆ ಹಾಲಿನ ಕ್ಯಾನನ್ನು ಮಾತ್ರ ಗಡಿ ದಾಟಿಸಬೇಕು, ಗ್ಯಾಸ್ , ಪಡಿತರ ಸೌಲಭ್ಯ ಇದ್ದರೂ ಪಡೆಯಲು ಗಡಿ ಅಡ್ಡಿ.
ಹೌದು ಇದು ಕರ್ನಾಟಕ-ಕೇರಳ ರಾಜ್ಯಗಳ ಗಡಿಯನ್ನು ಹಂಚಿಕೊಂಡಿರುವ ಬಂಟ್ವಾಳ ತಾಲೂಕಿನ ಅಡ್ಯನಡ್ಕ ಗ್ರಾಮದ ಸಮೀಪದ ಗಡಿನಾಡಿನ ಸುಮಾರು 700 ಕನ್ನಡಿಗ ಕುಟುಂಬಗಳ ಕೊರೊನಾ ಲಾಕ್ ಡೌನ್ ಬಳಿಕ ಎದುರಿಸುತ್ತಿರುವ ಸಂಕಷ್ಟಗಳು. ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಳೆದ ಎರಡು ತಿಂಗಳಿನಿಂದ ಅಂತರರಾಜ್ಯ ಗಡಿ ಬಂದ್ ಮಾಡಿರುವ ಹಿನ್ನಲೆಯಲ್ಲಿ ದಕ್ಷಿಣಕನ್ನಡದ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಸಾರಡ್ಕ ಚೆಕ್ ಪೋಸ್ಟ್ ಬಂದ್ ಆದ ಕಾರಣ ಗಡಿನಾಡ ಕನ್ನಡಿಗರ ಎಲ್ಲಾ ಸೌಲಭ್ಯಗಳಿಗೂ ತಡೆ ಹಾಕಿದಂತಾಗಿದೆ.
ಕರ್ನಾಟಕದ ಅಡ್ಯನಡ್ಕ ಪೇಟೆಯಿಂದ ಸುಮಾರು ಒಂದೂವರೆ ಕಿಲೋ ಮೀಟರ್ ಉತ್ತರಕ್ಕೆ ಕೇರಳದ ಎಣ್ಮಕಜೆ ಗ್ರಾಮಕ್ಕೆ ಸೇರಿದ ಎರಡು ವಾರ್ಡ್ ಗಳಿದ್ದು , ಇಲ್ಲಿನ ಮುಳಿಯಾಲ, ಸಾಯ, ಕೂಟೇಲು, ಬಾಕಿಲಪದವು, ಚೇರಾ, ಚವರ್ಕಾಡು ಗ್ರಾಮದ ಕುಟುಂಬಗಳಿಗೆ ರಸ್ತೆ ಸಂಪರ್ಕವೇ ಇಲ್ಲದಂತಾಗಿದೆ. ಈ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಕರ್ನಾಟಕ ರಾಜ್ಯದ ರಸ್ತೆಯನ್ನೇ ಈ ಭಾಗದ ಜನ ಅವಲಂಭಿಸಿದ್ದಾರೆ. ಈ ಭಾಗದ ಕನ್ನಡಿಗರು ಬೆಳೆದ ಬೆಳೆಗಳ ಸಾಗಾಣೆ, ಅಗತ್ಯ ವಸ್ತುಗಳಾದ ಪಡಿತರ, ಹಾಲು ಮೊದಲಾದ ಅಗತ್ಯಗಳಿಗೆ ಕರ್ನಾಟಕವನ್ನೇ ಅವಲಂಭಿಸಬೇಕಾಗಿದೆ. ರಸ್ತೆಯನ್ನು ಬಂದ್ ಮಾಡಿದ್ದರಿಂದ ಈ ಕುಟುಂಬಗಳು ಇದೀಗ ಸೀರೆ ನದಿಯನ್ನು ದಾಟಿ ಸುಮಾರು 4 ಕಿಲೋ ಮೀಟರ್ ಕಾಲು ದಾರಿಯಲ್ಲಿ ಸಾಗಿ ಪೆರ್ಲ ಪೇಟೆಯನ್ನು ಸಂಪರ್ಕಿಸಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದೆ.
ಈ ಭಾಗದ ಹೆಚ್ಚಿನ ಜನ ಕನ್ನಡಿಗರೇ ಆಗಿದ್ದು, ಇವರಿಗೆ ಗಡಿನಾಡ ಕನ್ನಡಿಗರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನೂ ಪಡೆಯುತ್ತಿದ್ದಾರೆ. ಈ ಭಾಗದ ಜನ ತನ್ನ ಎಲ್ಲಾ ಅವಶ್ಯಕತೆಗಳಿಗೂ ಕರ್ನಾಟಕವನ್ನೇ ಅವಲಂಭಿಸಿದ್ದು, ಇದೀಗ ಕೊರೊನಾ ಲಾಕ್ ಡೌನ್ ನಿಂದಾಗಿ ಈ ಗಡಿನಾಡ ಕನ್ನಡಿಗರಿಗೆ ಕರ್ನಾಟಕದ ಕೊಂಡಿಯನ್ನೇ ಕಡಿದಂತಾಗಿದೆ. ಇನ್ನೆಷ್ಟು ದಿನ ಕರ್ನಾಟಕದ ಭಾಂಧವ್ಯ ಬೆಸೆಯಲು ಕಾಯಬೇಕು ಎನ್ನುವ ಆಸೆಗಣ್ಣಿನಲ್ಲಿ ಗಡಿನಾಡ ಕನ್ನಡಿಗರಿದ್ದಾರೆ.