LATEST NEWS
ಮೀನು ಕಚ್ಚಿದ ಪರಿಣಾದ ಕೈಯನ್ನೇ ಕಳೆದುಕೊಂಡ ವ್ಯಕ್ತಿ – ಕೇರಳದಲ್ಲಿ ನಡೆದ ಅಪರೂಪದ ಘಟನೆ

ಕೇರಳ ಮಾರ್ಚ್ 14: ತೋಟದಲ್ಲಿದ್ದ ಸಣ್ಣ ಕೊಳದಲ್ಲಿದ್ದ ಮೀನನ್ನು ಹಿಡಿಯುವ ವೇಳೆ ಅದು ಕಚ್ಚಿದ ಪರಿಣಾಮ ವ್ಯಕ್ತಿಯೊಬ್ಬ ತನ್ನ ಕೈಯನ್ನೇ ಕಳೆದುಕೊಂಡ ಘಟನೆ ಕೇರಳದ ಥಲಸ್ಸೇರಿಯ ಮದಪೇಡಿಕಾ ಎಂಬಲ್ಲಿ ನಡೆದಿದೆ. ಕೇರಳದ ಥಲಸ್ಸೇರಿಯ ಮದಪೇಡಿಕಾ ಎಂಬಲ್ಲಿ ಹೈನುಗಾರಿಕೆ ನಡೆಸುತ್ತಿದ್ದ 38 ವರ್ಷದ ರಾಜೇಶ್ ಎಂಬವರಿಗೆ ಮೀನು ಕಡಿದು ಉಂಟಾದ ಗಾಯದಿಂದಾಗಿ ದೇಹ ಹೊಕ್ಕ ಸೋಂಕಿನ ಪರಿಣಾಮ ಅವರ ಬಲ ಮುಂಗೈಯನ್ನೇ ಇದೀಗ ಕತ್ತರಿಸಲಾಗಿದೆ.
ಫೆಬ್ರವರಿಯಲ್ಲಿ ರಾಜೇಶ್ ತಮ್ಮ ತೋಟದಲ್ಲಿದ್ದ ಸಣ್ಣ ಕೊಳದಲ್ಲಿದ್ದ ಕೇರಳದಲ್ಲಿ ಕಡು ಎಂದು ಕರೆಯಲ್ಪಡು ಮೀನನ್ನು ಹಿಡಿಯಲು ಹೋಗಿದ್ದಾರೆ. ಈ ವೇಳೆ ಮೀನಿನಿಂದಾಗಿ ರಾಜೇಶ್ ಅವರ ಬೆರಳ ತುದುಯಲ್ಲಿ ಸಣ್ಣ ಗಾಯವಾಗಿದೆ. ಆರಂಭದಲ್ಲಿ ನಿರ್ಲಕ್ಷಿಸಿದರೂ ದಿನವಿಡೀ ನೋವು ಉಂಟಾದ ಕಾರಣ ತಕ್ಷಣಕ್ಕೆ ಪಲ್ಲೂರ್ನ ಸರ್ಕಾರಿ ಆಸ್ಪತ್ರೆಗೆ ಹೋಗಿ ವೈದ್ಯರನ್ನು ಭೇಟಿ ಮಾಡಿದ್ದಾರೆ. ಚಿಕಿತ್ಸೆಯ ಬಳಿಕವೂ ನೋವು ಕಡಿಮೆಯಾಗಲಿಲ್ಲ. ಅಂಗೈವರೆಗೂ ಗುಳ್ಳೆಗಳು ಏಳಲು ಶುರುವಾಗಿದೆ.

ಇದರಿಂದ ಗಾಬರಿಗೊಂಡ ರಾಜೇಶ್, ಮಾಹೆಯಲ್ಲಿನ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಾರೆ. ಈ ವೇಳೆ ಅವರನ್ನು ಪರೀಕ್ಷಿಸಿದ ವೈದ್ಯರಿಗೆ ಸೋಂಕಿಗೆ ಕಾರಣವೇನು ಎಂಬುದನ್ನು ತಕ್ಷಣಕ್ಕೆ ತಿಳಿಯಲು ಸಾಧ್ಯವಾಗಲಿಲ್ಲ. ಇಲ್ಲೂ ಪರಿಹಾರ ಕಾಣದ ರಾಜೇಶ್, ಕೋಝಿಕ್ಕೋಡ್ನ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಾದರು. ಅಲ್ಲಿ ಅವರನ್ನು ಪರೀಕ್ಷೆಗೊಳಪಡಿಸಿದ ವೈದ್ಯರು, ಅಪರೂಪದ ಗ್ಯಾಸ್ ಗ್ಯಾಂಗ್ರೀನ್ ಆಗಿರುವುದನ್ನು ಪತ್ತೆ ಮಾಡಿದ್ದಾರೆ.
ಗ್ಯಾಸ್ ಗ್ಯಾಂಗ್ರೀನ್, ಅಂಗಾಂಶಗಳನ್ನು ನಾಶಪಡಿಸುವ ಮತ್ತು ಅದರೊಳಗೆ ಅನಿಲವನ್ನು ಉತ್ಪಾದಿಸುವ ತೀವ್ರ ಮತ್ತು ಮಾರಣಾಂತಿಕ ಬ್ಯಾಕ್ಟೀರಿಯಾ ಆಗಿದೆ. ಕೆಸರು ಮತ್ತು ಮರಳಿನ ನೀರಿನಲ್ಲಿ ಕಂಡುಬರುವ ಕ್ಲೋಸ್ಟ್ರಿಡಿಯಮ್ ಪರ್ಫ್ರಿಂಜನ್ಸ್ ಎಂಬ ಬ್ಯಾಕ್ಟೀರಿಯಾ ಇದಕ್ಕೆ ಕಾರಣವಾಗಿದೆ. ಗ್ಯಾಂಗ್ರೀನ್ನಿಂದಾಗಿ ಮೊದಲಿಗೆ ರಾಜೇಶ್‌ರ ಎರಡು ಬೆರಳುಗಳನ್ನು ಕತ್ತರಿಸಲಾಯಿತು. ಆದರೆ, ಅವರ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಾಣದೇ ಸೋಂಕು ಹರಡುತ್ತಿದ್ದ ಹಿನ್ನೆಲೆಯಲ್ಲಿ ಮುಂಗೈಯನ್ನು ಕತ್ತರಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಸೋಂಕು ಅಂಗೈಗೆ ಹರಡಿ ಕ್ರಮೇಣ ಮಿದುಳನ್ನು ಹಾಳುಮಾಡುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಮುಂಗೈ ಕತ್ತರಿಸದೇ ಬೇರೆ ದಾರಿ ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸಣ್ಣ ಮೀನೊಂದು ಪ್ರಗತಿಪರ ಕೃಷಿಕನಾಗಿದ್ದ ರಾಜೇಶ್ ಅವರ ಜೀವನವನ್ನೇ ಸಂಕಷ್ಟಕ್ಕೆ ಸಿಲುಕಿಸಿದೆ.
1 Comment