LATEST NEWS
ಸೊಮಾಲಿಯಾದ ಕರಾವಳಿ ಬಳಿ 15 ಮಂದಿ ಭಾರತೀಯರಿದ್ದ ಹಡಗು ಅಪಹರಣ, ರಕ್ಷಣೆಗೆ ಧಾವಿಸಿದ ನೌಕಪಡೆ..!
ನವದೆಹಲಿ: ಸೊಮಾಲಿಯಾ ಕರಾವಳಿಯ ಬಳಿ 15 ಮಂದಿ ಭಾರತೀಯ ಸಿಬ್ಬಂದಿ ಇದ್ದ ಹಡಗನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ.
ಲೈಬೀರಿಯಾ ಧ್ವಜ ಇರುವ ಸರಕು ಹಡಗನ್ನು ಸೊಮಾಲಿಯಾ ಕರಾವಳಿಯ ಬಳಿ ಅಪಹರಿಸಲಾಗಿದ್ದು, ಇದರಲ್ಲಿ 15 ಭಾರತೀಯ ಸಿಬ್ಬಂದಿ ಇದ್ದಾರೆ. ಭಾರತೀಯ ನೌಕಾಪಡೆಯು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯುದ್ಧನೌಕೆ ಐಎನ್ಎಸ್ ಚೆನ್ನೈ ಅನ್ನು ನಿಯೋಜಿಸಿದೆ. ಭಾರತೀಯ ನೌಕಾಪಡೆಯು ಅಪಹರಣಕ್ಕೊಳಗಾಗಿದ್ದ ಹಡಗಿನ ‘MV LILA NORFOLK’ (ಎಂವಿ ಲಿಲಾ ನಾರ್ಫೋಕ್) ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತೀಯ ನೌಕಾಪಡೆಯ ವಿಮಾನಗಳು ಹಡಗಿನ ಮೇಲೆ ನಿಗಾ ಇರಿಸಿದ್ದು, ಹಡಗಿನಲ್ಲಿನ ಸಿಬ್ಬಂದಿಯೊಂದಿಗೆ ಸಂಪರ್ಕ ಸ್ಥಾಪಿಸಲಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ. ಹಡಗು ಅಪಹರಣಕ್ಕೆ ಒಳಗಾದ ತಕ್ಷಣವೇ ತ್ವರಿತವಾಗಿ ಪ್ರತಿಕ್ರಿಯಿಸಿದ ಭಾರತೀಯ ನೌಕಾಪಡೆಯು ಸಹಾಯ ಮಾಡಲು ಕಡಲ ಭದ್ರತಾ ಕಾರ್ಯಾಚರಣೆಗಳಿಗಾಗಿ ನಿಯೋಜಿಸಲಾದ ಐಎನ್ಎಸ್ ಚೆನ್ನೈ ಯುದ್ಧನೌಕೆಯನ್ನು ಕಳುಹಿಸಿಕೊಟ್ಟಿದೆ. ಶುಕ್ರವಾರ ಬೆಳಗ್ಗೆ ವಿಮಾನವು ಹಡಗಿನ ಮೇಲೆ ಹಾರಾಟ ನಡೆಸಿದ್ದು, ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಹಡಗಿನ ಸಂಪರ್ಕವನ್ನು ಸ್ಥಾಪಿಸಿದೆ. ನೌಕಾಪಡೆಯ ವಿಮಾನಗಳು ನಿರಂತರವಾಗಿ ಚಲನೆಯನ್ನು ಮೇಲ್ವಿಚಾರಣೆ ಮಾಡುತ್ತಿವೆ. ಅಲ್ಲದೆ, ಐಎನ್ಎಸ್ ಚೆನ್ನೈ ಯುದ್ಧನೌಕೆಯು ಹಡಗನ್ನು ಸಮೀಪಿಸಿದೆ. ಅಪಹರಣಕ್ಕೊಳಗಾದ ಹಡಗಿನ ಮೇಲೆ ನಿಗಾ ಇರಿಸಲಾಗಿದ್ದು, ಭಾರತೀಯ ಸಿಬ್ಬಂದಿಯೊಂದಿಗೆ ಸಂವಹನ ನಡೆಸಲಾಗುತ್ತಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.