DAKSHINA KANNADA
ಬೆಂಗಳೂರಿನಿಂದ ಸುಳ್ಯಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿ- ಇಬ್ಬರಿಗೆ ಗಾಯ

ಮಡಿಕೇರಿ, ಏಪ್ರಿಲ್ 08: ಬೆಂಗಳೂರಿನಿಂದ ಸುಳ್ಯಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಮಡಿಕೇರಿ ತಾಲೂಕಿನ ಜೋಡುಪಾಲ ಸಮೀಪ ಮೈಸೂರು- ಮಂಗಳೂರು ರಸ್ತೆಯಲ್ಲಿ ಸೋಮವಾರ ನಸುಕಿನಲ್ಲಿ ಮಗುಚಿ ಬಿದ್ದಿದ್ದು, ಇಬ್ಬರಿಗೆ ಗಾಯಗಳಾಗಿವೆ.
ಘಟನೆಯಿಂದ ಕೆಲವು ಗಂಟೆಗಳ ಕಾಲ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ರಸ್ತೆಯ ಎರಡೂ ಕಡೆಗಳಲ್ಲಿಯೂ ವಾಹನಗಳು ಸಾಲುಗಟ್ಟಿದ್ದವು. ತಕ್ಷಣ ಸ್ಥಳಕ್ಕೆ ಬಂದ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಮಗುಚಿದ್ದ ಬಸ್ಸನ್ನು ಬದಿಗೆ ಸರಿಸಿ ರಸ್ತೆಯ ಒಂದು ಪಾರ್ಶ್ವದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಗೌರಿಶಂಕರ ಎಂಬ ಹೆಸರಿನ ಖಾಸಗಿ ಬಸ್ ಬೆಂಗಳೂರಿನಿಂದ ಸುಳ್ಯಕ್ಕೆ ತೆರಳುತ್ತಿತ್ತು. ಇದರಲ್ಲಿ 17 ಮಂದಿ ಪ್ರಯಾಣಿಕರಿದ್ದರು. ಇಬ್ಬರಿಗೆ ಲಘು ಗಾಯಗಳಾಗಿದ್ದು, ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.
ಘಟನೆಯ ಬಳಿಕ ರಸ್ತೆಯ ಒಂದು ಬದಿಯಲ್ಲಿ ವಾಹನಗಳು ಸಂಚರಿಸಿವೆ. ಬಸ್ ತೆರವುಗೊಳಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯ ಇನ್ ಸ್ಪೆಕ್ಟರ್ ಉಮೇಶ್ ಉಪ್ಪಳಿಕೆ ಸ್ಥಳಕ್ಕೆ ತೆರಳಿದ್ದಾರೆ.