KARNATAKA
ಕುಡಿವ ನೀರಿನ ಜಗಳಕ್ಕೆ ಮುರಿದು ಬಿದ್ದ ಮದುವೆ!

ಹಿರಿಯೂರು, ಮಾರ್ಚ್ 17: ಕುಡಿಯುವ ನೀರಿಗಾಗಿ ನಡೆದ ಜಗಳದಿಂದ ಮದುವೆಯೇ ಮುರಿದುಬಿದ್ದ ಘಟನೆ ಚಿತ್ರದುರ್ಗದ ಹಿರಿಯೂರು ನಗರದ ಬೆಂಗಳೂರು ರಸ್ತೆಯಲ್ಲಿರುವ ಬಲಿಜ ಶ್ರೇಯ ಸಮುದಾಯ ಭವನದಲ್ಲಿ ನಡೆದಿದೆ.
ಶನಿವಾರ-ರವಿವಾರ ಬಲಿಜ ಶ್ರೇಯ ಭವನದಲ್ಲಿ ಜಗಳೂರು ಮೂಲದ ಮನೋಜ್ ಕುಮಾರ್ ಮತ್ತು ತುಮಕೂರು ಜಿಲ್ಲೆ ಶಿರಾ ಮೂಲದ ಅನಿತಾ ಎಂಬುವರ ವಿವಾಹ ನಿಗದಿಯಾಗಿತ್ತು. ವಧೂ-ವರರ ಸಂಬಂಧಿಗಳು ಸಮುದಾಯ ಭವನಕ್ಕೆ ಮದುವೆಗೆ ಆಗಮಿಸಿದ್ದರು. ಶನಿವಾರ ರಾತ್ರಿ ಆರತಕ್ಷತೆ ನಡೆದಿದೆ.

ರಾತ್ರಿ ಊಟದ ಸಂದರ್ಭ ವಧುವಿನ ಕಡೆಯವರು ಕುಡಿಯುವ ನೀರು ಕೊಡಲು ಗಲಾಟೆ ಮಾಡಿದ್ದಾರೆ ಎಂದು ವರನ ಕಡೆಯವರು ಆರೋಪಿಸಿದ್ದಾರೆ. ಎರಡೂ ಕಡೆಯವರು ವಾಗ್ವಾದ ಮಾಡಿಕೊಂಡಿದ್ದಾರೆ. ಇದನ್ನೆಲ್ಲ ಕಂಡು ಬೇಸರಗೊಂಡಿದ್ದ ವಧು ಅನಿತಾ, ರವಿವಾರ ಬೆಳಗ್ಗೆ ಏಕಾಏಕಿ ಮದುವೆಯಾಗಲು ನಿರಾಕರಿಸಿದ್ದಾರೆ.
ಮದುವೆಗೆ ಒಪ್ಪುವಂತೆ ವರನ ಕಡೆಯವರು ಕೇಳಿಕೊಂಡರೂ ಒಪ್ಪಲಿಲ್ಲ. ವರ ಮನೋಜ್‌ಕುಮಾರ್ ಮತ್ತು ವಧು ಅನಿತಾ ಬೆಂಗಳೂರಿನ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಪರಸ್ಪರ ಒಪ್ಪಿ ಮದುವೆಗೆ ಮುಂದಾಗಿದ್ದರು. ಆದರೆ ಕ್ಷುಲ್ಲಕ ಕಾರಣಕ್ಕೆ ಮದುವೆ ನಿಂತ ಕಾರಣ ಎರಡೂ ಕಡೆಯವರು ನಿರಾಶೆಯಿಂದ ಮರಳಿದರು.