ಬೆಂಗಳೂರು, ಮಾರ್ಚ್ 25: ವಿಧಾನಸೌಧದಲ್ಲಿ ₹6 ಲಕ್ಷ ನಗದು ಹಣದೊಂದಿಗೆ ಬಂದ ಯುವಕನೊಬ್ಬ ಪೊಲೀಸರ ತಪಾಸಣೆಯಲ್ಲಿ ಸಿಕ್ಕಿಬಿದ್ದ ಘಟನೆ ಬೆಳಕಿಗೆ ಬಂದಿದೆ.

ಪ್ರವೇಶ ದ್ವಾರದಲ್ಲಿ ರೂಟೀನ್ ಪರಿಶೀಲನೆ ನಡೆಸುತ್ತಿದ್ದ ಭದ್ರತಾ ಸಿಬ್ಬಂದಿ, ಯುವಕನ ಬ್ಯಾಗ್ ಪರಿಶೀಲನೆ ಮಾಡಿದಾಗ ಅದರೊಳಗೆ ₹6 ಲಕ್ಷ ನಗದು ಹಣ ಪತ್ತೆಯಾಯಿತು. ಹೆಚ್ಚಿನ ಪ್ರಮಾಣದ ನಗದು ಹಣವನ್ನು ವಿಧಾನಸೌಧ ಒಳಗೆ ತೆಗೆದುಕೊಂಡು ಹೋಗಲು ಅವಕಾಶವಿಲ್ಲವೆಂದು ಪೊಲೀಸರು ತಿಳಿಸಿ, ಯುವಕನನ್ನು ತಡೆದರು. ವಿಚಾರಣೆ ವೇಳೆ ಯುವಕ, “ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಲೆಟರ್ ಹೆಡ್ ಪಡೆಯಲು ಬಂದಿದ್ದೇನೆ. ನನ್ನ ದೊಡ್ಡಪ್ಪ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದಕ್ಕಾಗಿ ಹಣವನ್ನು ತಂದಿದ್ದೇನೆ,” ಎಂದು ಹೇಳಿಕೆ ನೀಡಿದನು. ಈ ಹಿನ್ನೆಲೆಯಲ್ಲಿ ಯುವಕನನ್ನು ಪೊಲೀಸರು ವಶಕ್ಕೆ ಪಡೆದು, ಎಸಿಪಿ ಕೃಷ್ಣಯ್ಯ ಅವರ ಕಚೇರಿಯಲ್ಲಿ ಕೆಲಕಾಲ ವಿಚಾರಣೆ ನಡೆಸಿದರು. ನಂತರ ಸಮರ್ಪಕ ಮಾಹಿತಿ ದೊರೆತ ಹಿನ್ನೆಲೆ, ಹಣವನ್ನು ಹಿಂತಿರುಗಿಸಿ ಯುವಕನನ್ನು ಬಿಡುಗಡೆ ಮಾಡಲಾಯಿತು.