Connect with us

DAKSHINA KANNADA

ಸವೆಯುತ್ತಿರುವ ಶತಮಾನ ಕಂಡ ಸರಕಾರಿ ಕಾಲೇಜು…

ಪುತ್ತೂರು, ಆಗಸ್ಟ್ 27: ತಾಲೂಕು ಕ್ರೀಡಾಂಗಣಕ್ಕೆಂದು 20 ವರ್ಷಗಳ ಹಿಂದೆ ಅವೈಜ್ಞಾನಿಕ ರೀತಿಯಲ್ಲಿ ಮಣ್ಣು ಕೊರೆದ ಕೆಟ್ಟ ಪರಿಣಾಮವನ್ನು ಇದೀಗ ಶತಮಾನ ಪೂರೈಸಿದ ಸರಕಾರಿ ಕಾಲೇಜೊಂದು ಅನುಭವಿಸುವಂತಾಗಿದೆ.

ಕಾಲೇಜಿಗೆ ಸೇರಿದ ಕ್ರೀಡಾಂಗಣವನ್ನು ಯುವಜನ ಮತ್ತು ಕ್ರೀಡಾ ಇಲಾಖೆಗೆ ನೀಡಲಾಗಿತ್ತು. ಕ್ರೀಡಾಂಗಣದ ಅಭಿವೃದ್ಧಿಯ ಗುತ್ತಿಗೆ ಪಡೆದುಕೊಂಡ ಗುತ್ತಿಗೆದಾರ ಶಾಲೆಯ ಪಕ್ಕದಲ್ಲೇ ಇದ್ದ ಗುಡ್ಡದ ಮಣ್ಣನ್ನು ಕೊರೆದು ಸಮತಟ್ಟು ಮಾಡಿದ್ದ. ಈ ರೀತಿ ಮಣ್ಣು ಕೊರೆದಲ್ಲಿ ಕಾಲೇಜಿನ ಕಟ್ಟಡಕ್ಕೆ ಹಾನಿಯಾಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲರು ನೀಡಿದ್ದ ಎಚ್ಚರಿಕೆಯನ್ನು ಕಿವಿಗೆ ಹಾಕಿಕೊಳ್ಳದ ಕಾರಣ ಕಾಲೇಜು ಈ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

ಪುತ್ತೂರು ನಗರದ ಮಧ್ಯೆ ಇರುವಂತಹ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶತಮಾನದ ಇತಿಹಾಸವಿದೆ. ಬ್ರಿಟಿಷ್ ಕಾಲದಲ್ಲಿ ನಿರ್ಮಾಣಗೊಂಡಂತಹ ಈ ಕಾಲೇಜು ರಾಜ್ಯದಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಕೆಲವೇ ಸರಕಾರಿ ಶಿಕ್ಷಣ ಸಂಸ್ಥೆಯಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಕಾಲೇಜು ಹಾಗು ಪ್ರೌಡಶಾಲಾ ವಿಭಾಗಗಳನ್ನು ಹೊಂದಿರುವ ಈ ಸರಕಾರಿ ಕಾಲೇಜಿಗೆ ಸರಕಾರದ ಇನ್ನೊಂದು ಇಲಾಖೆ ಮಾಡಿದ ಕಾಮಗಾರಿಯೇ ಮಾರಕವಾಗಿ ಪರಿಣಿಸಿದೆ.

ಕಾಲೇಜಿಗೆ ಸೇರಿದ ಕ್ರೀಡಾಂಗಣವನ್ನು ತಾಲೂಕು ಕ್ರೀಡಾಂಗಣವಾಗಿ ಅಭಿವೃದ್ಧಿ ಪಡಿಸುವ ಹಿನ್ನಲೆಯಲ್ಲಿ ಸುಮಾರು 20 ವರ್ಷಗಳ ಹಿಂದೆ ಕ್ರೀಡಾಂಗಣವನ್ನು ಯುವಜನ ಮತ್ತು ಕ್ರೀಡಾ ಇಲಾಖೆಗೆ ನೀಡಲಾಗಿತ್ತು. ಕ್ರೀಡಾಂಗಣದ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಜಾಗದ ಸಮತಟ್ಟು ಮಾಡುವ ಸಂದರ್ಭದಲ್ಲಿ ಮೇಲ್ಭಾಗದಲ್ಲಿರುವ ಕಾಲೇಜು ಕಟ್ಟಡಕ್ಕೆ ತಾಗಿಕೊಂಡೇ ಇದ್ದ ಜಾಗದ ಮಣ್ಣನ್ನು ಆ ಸಮಯದಲ್ಲಿ ಅವೈಜ್ಞಾನಿಕವಾಗಿ ಕೊರೆಯಲಾಗಿತ್ತು.

ಕಾಮಗಾರಿ ನಡೆಯುತ್ತಿದ್ಧ ಸಮಯದಲ್ಲೇ ಕಾಲೇಜಿನ ಅಂದಿನ ಪ್ರಾಂಶುಪಾಲರು ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಆದರೆ ಆ ಸಂದರ್ಭದಲ್ಲಿ ಆಕ್ಷೇಪವನ್ನು ತಿರಸ್ಕರಿಸಿದ ಪರಿಣಾಮವನ್ನು ಇದೀಗ ಕಾಲೇಜು ಎದುರಿಸುವಂತಾಗಿದೆ. ಈಗಾಗಲೇ ಪ್ರೌಢಶಾಲಾ ವಿಭಾಗಕ್ಕೆ ಸೇರಿದ ಮೂರು ತರಗತಿ ಕೊಠಡಿಗಳು ಇಂದೋ-ನಾಳೆಯೋ ಕುಸಿಯುವ ಭೀತಿಯಲ್ಲಿದೆ. ಅಲ್ಲದೆ ಕಾಲೇಜಿನ ಆವರಣ ಗೋಡೆಯೂ ವಾಲಿಕೊಂಡಿದ್ದು, ಮಳೆ ಹೆಚ್ಚು ಬಂದಲ್ಲಿ ಬೀಳುವ ಕ್ಷಣಗಣನೆಯಲ್ಲಿದೆ.

ಆವರಣ ಗೋಡೆ ಬೀಳುವ ಸಾಧ್ಯತೆಯಿರುವ ಕಾರಣ, ಆ ಭಾಗಕ್ಕೆ ವಿದ್ಯಾರ್ಥಿಗಳು ಹೋಗದಂತೆ ನಿರ್ಬಂಧವನ್ನು ಹೇರಲಾಗಿದೆ. ಕಾಲೇಜಿನ ಈ ಅಪಾಯಕಾರಿ ಸ್ಥಿತಿಯ ಬಗ್ಗೆ ಸ್ಥಳೀಯ ಶಾಸಕರು, ಪುತ್ತೂರು ಸಹಾಯಕ ಆಯುಕ್ತರು, ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ

ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕಾಲೇಜಿನ ಮೂರು ಕೊಠಡಿಗಳು ಸಂಪೂರ್ಣ ಹಾನಿಯಾಗಿದ್ದು, ಈ ಹಾನಿಗೊಳಗಾದ ಕಟ್ಟಡವನ್ನು ಲೋಕೋಪಯೋಗಿ ಇಲಾಖೆಯ ಮೂಲಕ ನೆಲಸಮಗೊಳಿಸುವ ಕಾರ್ಯ ಶೀಘ್ರ ನಡೆಯಲಿದೆ. ಅಲ್ಲದೆ ತಾಲೂಕು ಕ್ರೀಡಾಂಗಣಕ್ಕಾಗಿ ಈಗಾಗಲೇ ಬೇರೆ ಜಾಗವನ್ನು ಗುರುತಿಸಲಾಗಿದ್ದು, ಈ ಹಿನ್ನಲೆಯಲ್ಲಿ ಸ್ಥಳೀಯ ಅನುದಾನಗಳನ್ನು ಬಳಸಿಕೊಂಡು ಆವರಣ ಗೋಡೆ ಹಾಗು‌ ಇತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ‌ ತೊಂದರೆಯಾಗದಂತೆ ನೋಡಿಕೊಳ್ಳಲು ಕಾಲೇಜು ಅಭಿವೃದ್ಧಿ ಸಮಿತಿ ತೀರ್ಮಾನಿಸಿದೆ ಎಂದು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ದಿ ಸಮಿತಿಯ ಕಾರ್ಯಧ್ಯಕ್ಷ  ಪಿ ಜಿ ಜಗನ್ನಿವಾಸ್ ಹೇಳಿದ್ದಾರೆ.

ಸರಕಾರ‌ ಅನುದಾನ ಬಿಡುಗಡೆ ಮಾಡುತ್ತದೆ ಎನ್ನುವ ಕಾರಣಕ್ಕೆ ಹಣವನ್ನು ಹೇಗಾದರೂ ಪೋಲು ಮಾಡಬೇಕು ಎನ್ನುವ ಮನಸ್ಥಿತಿಯ ಆಡಳಿತ ವ್ಯವಸ್ಥೆಯಿಂದಾಗಿ ಶತಮಾನ ಪೂರೈಸಿದ ಸರಕಾರಿ ಶಾಲೆ ಇದೀಗ ಸಂಕಷ್ಟಕ್ಕೆ ಸಿಲುಕಿದೆ.

https://youtu.be/Q4iPywpnT0I

Share Information
Continue Reading
Advertisement
Click to comment

Leave a Reply

Your email address will not be published. Required fields are marked *