ಉತ್ತರ ಪ್ರದೇಶ, ಡಿಸೆಂಬರ್ 03: 21ನೇ ಶತಮಾನದಲ್ಲಿ ಅಧಿಕ ಮಂದಿ ಆಧುನಿಕ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ಸಂದರ್ಭದಲ್ಲಿ 19 ವರ್ಷದ ಯುವಕನೊಬ್ಬ ʼಶುಕ್ಲ ಯಜುರ್ವೇದದ ಮಧ್ಯಂದಿನಿ ಶಾಖೆಯ ಕಠಿಣ ವೇದ ಪಾರಾಯಣಗಳ ಅಭ್ಯಾಸಗೊಳಿಸಿ ಕಂಠಪಾಠದಿಂದ ಸತತವಾಗಿ ಪ್ರಸ್ತುತಪಡಿಸಿ ಮಂತ್ರಮುಗ್ಧರನ್ನಾಗಿಸಿ ದೇಶದ ಸಂಸ್ಕೃತಿಯ ಎತ್ತಿ ಹಿಡಿದಿದ್ದು, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಹಿತ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
200 ವರ್ಷಗಳ ಬಳಿಕ ಅಪರೂಪದ ಸಾಧನೆ
ಉತ್ತರ ಪ್ರದೇಶದ ವಾರಣಾಸಿಯಲ್ಲಿ 19 ವರ್ಷದ ವೇದಮೂರ್ತಿ ದೇವವ್ರತ ಮಹೇಶ್ ರೇಖೆ 2,000 ಮಂತ್ರಗಳು ಮತ್ತು ವೇದ ಶ್ಲೋಕಗಳನ್ನು ಪಠಿಸುವ ಅಪರೂಪದ ಸಾಧನೆ ಮಾಡಿದ್ದು, ಪವಿತ್ರ ಪುಣ್ಯ ಕ್ಷೇತ್ರ ವಾರಣಾಸಿಯ ವಲ್ಲಭರಂ ಶಾಲಿಗ್ರಾಮ್ ಸಾಂಗ್ವೇದ ವಿದ್ಯಾಲಯದಲ್ಲಿ ಅ.2ರಿಂದ ನ.30ರವರೆಗೆ ಸತತ 50 ದಿನಗಳ ಕಾಲ 2,000 ಮಂತ್ರಗಳು ಮತ್ತು ವೇದ ಶ್ಲೋಕಗಳನ್ನು ಯಾವುದೇ ಅಡಚಣೆಯಿಲ್ಲದೆ ಪೂರ್ಣಗೊಳಿಸಿದ್ದಾರೆ. ಇದು ಸುಮಾರು 200 ವರ್ಷಗಳ ನಂತರ ಮಾಡಿರುವ ಅಪರೂಪದ ಸಾಧನೆಯಾಗಿದ್ದು, 200 ವರ್ಷಗಳ ಹಿಂದೆ ಕಾಶಿಯಲ್ಲಿ ಮೊದಲ ಬಾರಿಗೆ ವೇದಮೂರ್ತಿ ನಾರಾಯಣ ಶಾಸ್ತ್ರಿ ದೇವ್ ದಂಡಕ್ರಮ ಪಾರಾಯಣ ನಡೆಸಿದ್ದರು. ಅಂದಿನಿಂದ ಇಂದಿನ ವರೆಗೂ ಯಾರೂ ಮಾಡಲಾರದಂತಹ ಸಾಧನೆಯ ಮಾಡಿದ್ದಾರೆ.
ವೇದಮೂರ್ತಿ ದೇವವ್ರತ ಮಹೇಶ್ ಸಾಧನೆಗೆ ಸಂಭ್ರಮದ ಭಾಗವಾಗಿ ಕಾಶಿಯ ರಥಯಾತ್ರಾ ಕ್ರಾಸಿಂಗ್ನಿಂದ ಮಹಮೂರ್ಗಂಜ್ವರೆಗೆ ವೈಭವದ ರಥಯಾತ್ರೆ ಮೆರವಣಿಗೆ ನಡೆಯಿತು. 500ಕ್ಕೂ ಹೆಚ್ಚು ವೇದ ವಿದ್ಯಾರ್ಥಿಗಳು, ಸಾಂಪ್ರದಾಯಿಕ ಸಂಗೀತಗಾರರು ಮತ್ತು ಶಂಖಧ್ವನಿಯ ನಾದದ ಮೂಲಕ ನಗರಕ್ಕೆ ಭವ್ಯವಾಗಿ ಸ್ವಾಗತಿಸಲಾಯಿತು. ಈ ಮೆರವಣಿಗೆ ವೇಳೆ ಜನರು ಬೀದಿಗಳಲ್ಲಿ ಸಾಲುಗಟ್ಟಿ ನಿಂತು ಹೂವು ಮಳೆಯ ಸುರಿಸಿದರು. ಸಂಭ್ರಮದ ಸಮಾರಂಭದಲ್ಲಿ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತಿ ತೀರ್ಥ ಸ್ವಾಮೀಜಿಯವರ ವಿಶೇಷ ಆಶೀರ್ವಾದ ಸಂದೇಶವನ್ನು ಆಸ್ಥಾನ ವಿದ್ವಾನ್ ಡಾ. ತಂಗಿರಾಲ ಶಿವಕುಮಾರ ಶರ್ಮಾ ವಾಚಿಸಿದರು.
ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ
ವೇದಮೂರ್ತಿ ದೇವವ್ರತ ಮಹೇಶ್ ರೇಖೆಯು ಸತತ 50 ದಿನ ವೇದ ಶ್ಲೋಕಗಳನ್ನು ಪಠಿಸಿ ಅಪರೂಪದ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದು, 19 ಹರೆಯದ ಈ ಯುವಕನ ವೇದ ಜ್ಞಾನ ಹಾಗೂ ಪರಂಪರೆಯ ಪ್ರಗತಿಯ ಪಥಕ್ಕೆ ನಾಂದಿ ಹಾಡಲು ಈತನಿಗಿರುವ ಶುದ್ಧ ಮನೋಶಕ್ತಿಗೆ ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಎಕ್ಸ್ ನಲ್ಲಿ ಶ್ಲಾಘಿಸಿ ” 19 ವರ್ಷದ ವೇದಮೂರ್ತಿ ದೇವವ್ರತ ಮಹೇಶ್ ರೇಖೆ ಮಾಡಿದ ಕಾರ್ಯವನ್ನು ಮುಂಬರುವ ಪೀಳಿಗೆಗಳು ಸ್ಮರಿಸಲಿವೆ. ಭಾರತೀಯ ಸಂಸ್ಕೃತಿಯ ಬಗ್ಗೆ ಒಲವು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ಶುಕ್ಲ ಯಜುರ್ವೇದದ ಮಧ್ಯಂದಿನಿ ಶಾಖೆಯ 2,000 ಮಂತ್ರಗಳನ್ನು ಒಳಗೊಂಡಿರುವ ದಂಡಕ್ರಮ ಪಾರಾಯಣವನ್ನು 50 ದಿನಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳಿಸಿದ್ದಕ್ಕಾಗಿ ಅವರ ಬಗ್ಗೆ ಹೆಮ್ಮೆಪಡುತ್ತಾರೆ. ಇದರಲ್ಲಿ ಹಲವಾರು ವೇದ ಶ್ಲೋಕಗಳು ಮತ್ತು ಪವಿತ್ರ ಪದಗಳ ದೋಷರಹಿತವಾಗಿ ಪಠಿಸಿದ್ದಾರೆ. ಅವರು ನಮ್ಮ ಗುರು ಸಂಪ್ರದಾಯದ ಅತ್ಯುತ್ತಮ ಉದಾಹರಣೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಶಿ ಕ್ಷೇತ್ರದ ಸಂಸದನಾಗಿ, ಈ ಅಸಾಧಾರಣ ಸಾಧನೆ ಈ ಪವಿತ್ರ ನಗರದಲ್ಲಿ ನಡೆದಿದ್ದಕ್ಕೆ ನಾನು ಹರ್ಷಿಸುತ್ತೇನೆ. ಅವರ ಕುಟುಂಬಕ್ಕೆ, ಅವರನ್ನು ಬೆಂಬಲಿಸಿದ ಭಾರತದಾದ್ಯಂತ ಹಲವಾರು ಸಂತರು, ಋಷಿಗಳು, ವಿದ್ವಾಂಸರು ಮತ್ತು ಸಂಸ್ಥೆಗಳಿಗೆ ನನ್ನ ಪ್ರಣಾಮಗಳು ಎಂದು ಬರೆದು ನಮನ ಸಲ್ಲಿಸಿದ್ದಾರೆ.
ಆಧ್ಯಾತ್ಮಿಕ ಜಗತ್ತಿಗೆ ಸ್ಫೂರ್ತಿಯ ಸಂಕೇತ: ಸಿಎಂ ಯೋಗಿ
ವೇದಮೂರ್ತಿ ದೇವವ್ರತ ಮಹೇಶ್ ರೇಖೆ ಸಾಧನೆಗೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರದ 19 ವರ್ಷದ ವೈದಿಕ ಸಾಧಕರು ವಿಶಿಷ್ಟ ಸಾಧನೆ ಮತ್ತು ಗಮನಾರ್ಹ ಸ್ಮರಣೆ ಮೂಲಕ 2,000 ವೇದ ಮಂತ್ರಗಳನ್ನು ಕಂಠಪಾಠ ಮಾಡುವ ಮೂಲಕ ಅಸಾಧಾರಣ ಸಾಧನೆ ಮಾಡಿದ್ದಾರೆ. ಇದು ಇಡೀ ಆಧ್ಯಾತ್ಮಿಕ ಜಗತ್ತಿಗೆ ಸ್ಫೂರ್ತಿಯ ಹೊಸ ದಾರಿದೀಪ ಎಂದು ಬರೆದಿದ್ದಾರೆ.
ಈ ವೈದಿಕ ಆಚರಣೆಯು ಕಾಶಿಯ ದೈವಿಕ ಪವಿತ್ರ ಮಣ್ಣಿನಲ್ಲಿ ನೆರವೇರಿದೆ ಎಂಬುದು ನನಗೆ ವಿಶೇಷ ಹೆಮ್ಮೆಯ ವಿಷಯ. ಅವರ ಕುಟುಂಬ, ಆಚಾರ್ಯರು, ಸಂತರು, ಋಷಿಗಳು ಮತ್ತು ಈ ಸಾಧನೆಯ ಯಶಸ್ವಿಗೊಳಿಸಿದ ಎಲ್ಲಾ ಸಂಸ್ಥೆಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ದೇವವ್ರತ ಜಿ, ನಿಮ್ಮ ಸಾಧನೆಯು ಮುಂದಿನ ಪೀಳಿಗೆಗೆ ಸ್ಫೂರ್ತಿಯ ಮಾರ್ಗದರ್ಶಕ ಬೆಳಕಾಗಲಿ. ನಿಮ್ಮ ನಿರಂತರ ಯಶಸ್ಸಿಗೆ ಶುಭಾಶಯಗಳೊಂದಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಎಕ್ಸ್ನಲ್ಲಿ ಸಿಎಂ ಯೋಗಿ ಬರೆದಿದ್ದಾರೆ.
ವೇದಮೂರ್ತಿ ದೇವವ್ರತ ಮಹೇಶ್ ರೇಖೆ ಸಾಧನೆಗೆ ಸಿಎಂ ಯೋಗಿ ಆದಿತ್ಯನಾಥ್ ಕಾಶಿ ತಮಿಳ್ ಸಂಗಮಮ್ ಕಾರ್ಯಕ್ರಮದಲ್ಲಿ ವೇದಮೂರ್ತಿ ಹಾಗೂ ಪೋಷಕರಿಗೆ ಸನ್ಮಾನಿಸಿದ್ದಾರೆ.
ವೇದಮೂರ್ತಿ ದೇವವ್ರತ ಮಹೇಶ್ ರೇಖೆ ರಿಗೆ ಕರ್ನಾಟಕದ ನಂಟು
ಪುಣ್ಯ ಕ್ಷೇತ್ರ ವಾರಾಣಸಿಯಲ್ಲಿ 200 ವರ್ಷಗಳ ಬಳಿಕ ಅಪರೂಪದ ಕ್ಷಣವನ್ನು ಸೃಷ್ಟಿಸುವ ಮೂಲಕ ಅಸಾಧಾರಣ ಸಾಧನೆ ಮಾಡಿದ 21ನೇ ಶತಮಾನದ ಮಹಾನ್ ಸಾಧಕ ವೇದಮೂರ್ತಿ ದೇವವ್ರತ ಮಹೇಶ್ ರೇಖೆ ಮೂಲತಃ ಮಹಾರಾಷ್ಟ್ರದ ನಾಸಿಕ್ ಸಮೀಪದ ಅಹಲ್ಯಾನಗರ ಜಿಲ್ಲೆಯವರು. ಹುಟ್ಟಿದ್ದೇ ಸದಾ ವೇದಾಧ್ಯಯನದಲ್ಲಿ ನಿರತರಾಗಿರುವ ಕಟ್ಟಾ ಪಂಡಿತರ ಕುಟುಂಬದಲ್ಲಿ. ಇವರ ತಂದೆ ಮಹೇಶ್ ಚಂದ್ರಕಾಂತ್ ರೇಖೆ ಕೂಡ ಒಬ್ಬ ಮಹಾನ್ ವೇದ ಬ್ರಹ್ಮರ್ಷಿ.
ಇವರು ಕರ್ನಾಟಕದ ಶೃಂಗೇರಿ ಪೀಠದ ವೇದ ಪೋಶಾಕ ಸಭಾದ ಶುಕ್ಲ ಯಜುರ್ವೇದ ಮಧ್ಯಂದಿನ ಶಾಖಾ ಪರೀಕ್ಷೆಗಳಲ್ಲಿ ಮುಖ್ಯ ಪರೀಕ್ಷಕ ಮತ್ತು ದೇವವ್ರತ ಮಹೇಶ್ ರೇಖೆ ಅವರ ಪ್ರಮುಖ ಗುರು. ತಂದೆಯೊಂದಿಗೆ ಅವರ ತಾಯಿಯು ತಂದೆಯ ಕನಸನ್ನು ನೆರವೇರಿಸಲು ಈ ಐತಿಹಾಸಿಕ ಸಾಧನೆಯ ತಾಳ್ಮೆಯಿಂದ ಪೂರೈಸಲು ಪ್ರೇರಣೆ ನೀಡುವ ಮೂಲಕ ಇವರ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಸಾಂಸ್ಕೃತಿಕ ಹಾಗೂ ವೇದ ಜ್ಞಾನದ ಮೂಲಕ ಭಾರತೀಯ ಸನಾತನ ಧರ್ಮ ಆಚರಣೆಯಲ್ಲಿ ಸುದೀರ್ಘ ಕಾಲದಿಂದ ಮರಿಚೀಕೆಯಾಗಿದ್ದ ಹಾಗೂ ಸುಮಾರು 2 ಶತಮಾನಗಳ ನಂತರ ಮಾಡಿರುವ ಈ ಸಾಧನೆಯ ಶ್ಲಾಘಿಸಿ ಶೃಂಗೇರಿ ಮಠದ ಶ್ರೀ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶಾರದಾ ಪೀಠದಿಂದ 5 ಲಕ್ಷ ರೂ.ಮೌಲ್ಯದ ಚಿನ್ನದ ಕೈ ಕಡಗ (ಬ್ರೇಸ್ಲೆಟ್) ಹಾಗೂ 1 ಲಕ್ಷದ 11 ಸಾವಿರದ 116 ರೂ.ಗಳನ್ನು ನೀಡಿ ಪುರಸ್ಕರಿಸಲಾಗಿದೆ.