ವಿಶಾಖಪಟ್ಟಣ ಅಗಸ್ಟ್ 02: ಸ್ನೇಹಿತರ ದಿನಾಚರಣೆಯನ್ನು (ಫ್ರೆಂಡ್ಶಿಪ್ ಡೇ) ಆಚರಿಸಲು ಹಾಗೂ ಫೋಟೋಶೂಟ್ಗಾಗಿ ವಿಶಾಖಪಟ್ಟಣದ ಹಳೆಯ ಗಂಗಾವರಂ ಬೀಚ್ಗೆ ತೆರಳಿದ್ದ ಏಳು ಮಂದಿ ಗೆಳೆಯರ ಗುಂಪಿನಲ್ಲಿದ್ದ ಇಬ್ಬರು ಸಮುದ್ರದ ಬೃಹತ್ ಅಲೆಗಳಿಗೆ ಕೊಚ್ಚಿಹೋಗಿ ನಾಪತ್ತೆಯಾಗಿರುವ ದಾರುಣ ಘಟನೆ ಭಾನುವಾರ (ಆಗಸ್ಟ್ 2, 2026) ಸಂಭವಿಸಿದೆ.

ಪೆಂಡುರ್ತಿಯ ಆಟೋ ಚಾಲಕ ದಾಮೋದರ್, ಜಲರಿಪೇಟೆಯ ನಿವಾಸಿ ನೀತು ಸೇರಿದಂತೆ ಐವರು ಸ್ನೇಹಿತರು ಭಾನುವಾರ ಆನಂದದಿಂದ ಸ್ನೇಹ ದಿನ ಆಚರಿಸಲು ಗಂಗಾವರಂ ಬೀಚ್ಗೆ ಆಗಮಿಸಿದ್ದರು. ಬೀಚ್ನಲ್ಲಿ ಫೋಟೋ ಹಾಗೂ ವೀಡಿಯೊ ಚಿತ್ರೀಕರಣದಲ್ಲಿ ತೊಡಗಿದ್ದಾಗ, ಸಮುದ್ರದಲ್ಲಿ ಏಕಾಏಕಿ ಬಂದ ಭಾರಿ ಎತ್ತರದ ಅಲೆಗಳು ಇವರನ್ನು ಸೆಳೆದುಕೊಂಡಿವೆ. ಈ ವೇಳೆ ನೀತು ಹಾಗೂ ದಾಮೋದರ್ ಸಮುದ್ರದ ಆಳಕ್ಕೆ ಕೊಚ್ಚಿಹೋಗಿದ್ದಾರೆ.
ಘಟನೆ ನಡೆದ ತಕ್ಷಣ ಉಳಿದ ಸ್ನೇಹಿತರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ರಕ್ಷಣಾ ಪಡೆ, ಕರಾವಳಿ ಕಾವಲು ಪಡೆ ಹಾಗೂ ಕೋಸ್ಟ್ ಗಾರ್ಡ್ ಸಿಬ್ಬಂದಿ ನಾಪತ್ತೆಯಾಗಿರುವ ನೀತು ಮತ್ತು ದಾಮೋದರ್ ಪತ್ತೆಗಾಗಿ ಸಮುದ್ರದಲ್ಲಿ ತೀವ್ರ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನ್ಯೂ ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.