ಬೆಳ್ತಂಗಡಿ ಅಗಸ್ಟ್ 02: ನೆಲ್ಯಾಡಿ ಸಮೀಪದ ರೇಖ್ಯಾ ಗ್ರಾಮದ ನೆಲ್ಯಡ್ಕ–ಇಡ್ಮಾಳ್ ನಿವಾಸಿ ಬಾಲಕೃಷ್ಣ ಗೌಡ ಅವರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ಮೃತರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ₹5 ಲಕ್ಷ ಮೊತ್ತದ ತುರ್ತು ಪರಿಹಾರ ಚೆಕ್ ಹಸ್ತಾಂತರಿಸಲಾಗಿದೆ.

ಶನಿವಾರ ಸಂಜೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಬಾಲಕೃಷ್ಣ ಗೌಡ ನಾಪತ್ತೆಯಾಗಿದ್ದರು. ದಾರಿಯಲ್ಲಿ ಅವರ ರೈನ್ಕೋಟ್ ಹಾಗೂ ಕಾಡಾನೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಭಾನುವಾರ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಘಟನಾ ಸ್ಥಳ ಹಾಗೂ ಮೃತರ ಮನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ದಕ್ಷಿಣ ಕನ್ನಡ ಜಿಲ್ಲಾ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ (DCF) ರವಿಶಂಕರ್ (IFS) ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಘಟನೆ ಕುರಿತು ಮಾತನಾಡಿದ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, “ಆನೆ ದಾಳಿಯಲ್ಲಿ ಮೃತಪಟ್ಟ ಬಾಲಕೃಷ್ಣ ಗೌಡ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ₹5 ಲಕ್ಷ ತುರ್ತು ಪರಿಹಾರ ಚೆಕ್ ನೀಡಲಾಗಿದೆ. ಸರ್ಕಾರದ ಹೊಸ ನಿಯಮಾವಳಿಯಂತೆ ಒಟ್ಟು ₹20 ಲಕ್ಷ ಪರಿಹಾರ ಧನ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ, ನಿಯಮದಂತೆ ಮೃತರ ಕುಟುಂಬಕ್ಕೆ ಪ್ರತಿ ತಿಂಗಳು ₹5,000 ಮಾಸಾಶನ (ಪಿಂಚಣಿ) ನೀಡಲಾಗುವುದು,” ಎಂದು ಸ್ಪಷ್ಟಪಡಿಸಿದ್ದಾರೆ. ಸುಳ್ಯ, ಕಡಬ, ಬೆಳ್ತಂಗಡಿ ಹಾಗೂ ಪುತ್ತೂರು ಭಾಗಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಆನೆ ಹಾವಳಿಗೆ ಶಾಶ್ವತ ತಡೆಗೋಡೆ ಹಾಗೂ ಸೂಕ್ತ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.