ಸಕಲೇಶಪುರ/ಮಂಗಳೂರು ಅಗಸ್ಟ್ 02: ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಕಲೇಶಪುರ ತಾಲೂಕಿನ ಯಡಕುಮೇರಿ ಹಾಗೂ ಶಿರಿಬಾಗಿಲು ರೈಲು ನಿಲ್ದಾಣಗಳ ನಡುವಿನ ಹಳಿಯಲ್ಲಿ ಶನಿವಾರ ರಾತ್ರಿ 8.45ಕ್ಕೆ ಭೀಕರ ಭೂಕುಸಿತ ಸಂಭವಿಸಿದೆ. ಪರಿಣಾಮವಾಗಿ ಕರಾವಳಿ ಹಾಗೂ ರಾಜಧಾನಿ ಬೆಂಗಳೂರು ನಡುವಿನ ಪ್ರಮುಖ ರೈಲು ಸಂಚಾರ ಸಂಪೂರ್ಣ ತಡೆಹಿಡಿಯಲ್ಪಟ್ಟಿದೆ.

ಘಟನಾ ಸ್ಥಳದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ರೈಲು ಹಳಿಯ ಮೇಲೆ ಬಿದ್ದಿರುವ ಅಪಾರ ಪ್ರಮಾಣದ ಮಣ್ಣು ಮತ್ತು ಬೃಹತ್ ಬಂಡೆಕಲ್ಲುಗಳನ್ನು ತೆರವುಗೊಳಿಸುವ ಕಾರ್ಯ ರೈಲ್ವೆ ಸಿಬ್ಬಂದಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಾರ್ಯಾಚರಣೆಯನ್ನು ವೇಗಗೊಳಿಸಲು ಸ್ಥಳಕ್ಕೆ ಹೆಚ್ಚುವರಿ ಹಿಟಾಚಿ ಯಂತ್ರಗಳು ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಾಡಿ ಅವರು ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ನೈಋತ್ಯ ರೈಲ್ವೆಯು ಬೆಂಗಳೂರು–ಮಂಗಳೂರು ಮಾರ್ಗದ ಹಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಿದ್ದು, ಕೆಲ ರೈಲುಗಳನ್ನು ಪರ್ಯಾಯ ಮಾರ್ಗಕ್ಕೆ ಹಾದಿ ಬದಲಿಸಿ ಕಾರ್ಯಾಚರಣೆ ನಡೆಸುತ್ತಿದೆ. ಹಳಿ ಪುನಃಸ್ಥಾಪನೆ ಬಳಿಕವಷ್ಟೇ ಸಹಜ ಸಂಚಾರ ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ಎಂವಿಟಿ ಬೆಂಗಳೂರು – ಮುರುಡೇಶ್ವರ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16585) ರೈಲು ಹಾಸನ ನಿಲ್ದಾಣದಲ್ಲೇ ನಿಲುಗಡೆಯಾಗಿದ್ದು, ಹಾಸನ–ಮುರುಡೇಶ್ವರ ನಡುವಿನ ಸಂಚಾರ ರದ್ದುಪಡಿಸಲಾಗಿದೆ. ಕೆಎಸ್ಆರ್ ಬೆಂಗಳೂರು – ಕೋಝಿಕ್ಕೋಡ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16511) ಹಾಸನ ನಿಲ್ದಾಣದಲ್ಲೇ ನಿಂತಿದ್ದು, ಮುಂದಿನ ಪ್ರಯಾಣ ರದ್ದುಗೊಳಿಸಲಾಗಿದೆ. ವಿಜಯಪುರ – ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ 17377) ಹಾಸನ ನಿಲ್ದಾಣದಲ್ಲೇ ನಿಂತಿದೆ. ಕೆಎಸ್ಆರ್ ಬೆಂಗಳೂರು – ಕಾರವಾರ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16595) ಸಕಲೇಶಪುರದಲ್ಲಿ ನಿಲುಗಡೆಯಾಗಿದೆ.
ಮುರುಡೇಶ್ವರ–ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ (ರೈಲು ಸಂಖ್ಯೆ 16586) ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ, ಕೊಝಿಕ್ಕೋಡ್– ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (ರೈಲು ಸಂಖ್ಯೆ 16512) ಕಬಕ ಪುತ್ತೂರು ನಿಲ್ದಾಣದಲ್ಲಿ, ಮಂಗಳೂರು ಸೆಂಟ್ರಲ್ – ವಿಜಯಪುರ ಎಕ್ಸ್ಪ್ರೆಸ್ (ರೈಲು ಸಂಖ್ಯೆ 17378) ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲೇ ನಿಲುಗಡೆಯಾಗಿವೆ.

ರೈಲು ಸಂಚಾರ ರದ್ದು: ಮಂಗಳೂರು ಜಂಕ್ಷನ್–ಯಶವಂತಪುರ ಎಕ್ಸ್ಪ್ರೆಸ್ (ರೈ.ಸಂ. 16540) ಹಾಗೂ ಯಶವಂತಪುರ–ಮಂಗಳೂರು ಜಂಕ್ಷನ್ (ರೈ.ಸಂ. 16575), ಕೆಎಸ್ಆರ್ ಬೆಂಗಳೂರು–ಕಾರವಾರ ಪಂಚಗಂಗಾ ಎಕ್ಸ್ಪ್ರೆಸ್ (ರೈ.ಸಂ. 16595), ಕಾರವಾರ–ಕೆಎಸ್ಆರ್ ಬೆಂಗಳೂರು (ರೈ.ಸಂ. 16596) ರೈಲು ಸಂಚಾರ ರದ್ದುಗೊಳಿಸಲಾಗಿದೆ.
ಮಾರ್ಗ ಬದಲಾವಣೆ: ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ (ರೈ.ಸಂ. 17377) ರೈಲು ಹುಬ್ಬಳ್ಳಿ–ಲೋಂಡಾ–ಕ್ಯಾಸಲ್ ರಾಕ್–ಮಡಗಾಂವ್–ಕಾರವಾರ–ತೋಕೂರು ಮೂಲಕ ಮಂಗಳೂರು ಜಂಕ್ಷನ್ ತಲುಪಲಿದೆ. ಮಂಗಳೂರು ಸೆಂಟ್ರಲ್–ವಿಜಯಪುರ ಎಕ್ಸ್ಪ್ರೆಸ್ (ರೈ.ಸಂ. 17378) ಮಂಗಳೂರು ಜಂಕ್ಷನ್–ತೋಕೂರು–ಕಾರವಾರ–ಮಡಗಾಂವ್–ಕ್ಯಾಸಲ್ ರಾಕ್–ಲೋಂಡಾ–ಹುಬ್ಬಳ್ಳಿ ಮಾರ್ಗವಾಗಿ ವಿಜಯಪುರಕ್ಕೆ ಸಂಚರಿಸಲಿದೆ.
ಮುರುಡೇಶ್ವರ–ಎಸ್ಎಂವಿಟಿ ಬೆಂಗಳೂರು (ರೈ.ಸಂ. 16586) ಎಕ್ಸ್ಪ್ರೆಸ್ ರೈಲು ಮುರುಡೇಶ್ವರ–ತೋಕೂರು–ಮಂಗಳೂರು ಸೆಂಟ್ರಲ್–ಕಣ್ಣೂರು–ಶೊರನೂರು –ಪಾಲಕ್ಕಾಡ್–ಪೊದನೂರು–ಜೋಲಾರಪೇಟೆ–ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ಮಾರ್ಗವಾಗಿ ಸಂಚರಿಸಲಿದೆ.
ಕೋಝಿಕ್ಕೋಡ್–ಬೆಂಗಳೂರು ಎಕ್ಸ್ಪ್ರೆಸ್ (ರೈ.ಸಂ.16512) ರೈಲು, ಮಂಗಳೂರು ಸೆಂಟ್ರಲ್–ಕಣ್ಣೂರು–ಶೊರನೂರ–ಪಾಲಕ್ಕಾಡ್–ಪೊದನೂರು–ಜೋಲಾರಪೇಟೆ–ಎಸ್ಎಂವಿಟಿ ಬೆಂಗಳೂರು ಮೂಲಕ ಸಂಚರಿಸಲಿದೆ.
ಬೆಂಗಳೂರು–ಕೋಝಿಕ್ಕೋಡ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16511) ಕೆಎಸ್ಆರ್ ಬೆಂಗಳೂರು ಬದಲಿಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ನಿಲ್ದಾಣದಿಂದಲೇ ಪ್ರಯಾಣ ಆರಂಭಿಸಲಿದ್ದು, ಎಸ್ಎಂವಿಟಿ–ಜೋಲಾರಪೇಟೆ–ಪೊದನೂರು–ಪಾಲಕ್ಕಾಡ್–ಶೊರನೂರ–ಕೊಝಿಕ್ಕೋಡ್–ಮಂಗಳೂರು ಸೆಂಟ್ರಲ್ ಮಾರ್ಗವಾಗಿ ಸಂಚರಿಸಲಿದೆ.
ಎಸ್ಎಂವಿಟಿ ಬೆಂಗಳೂರು–ಮುರುಡೇಶ್ವರ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16585) ಎಸ್ಎಂವಿಟಿ ಬೆಂಗಳೂರು–ಓಮಲೂರು–ಪೊದನೂರು–ಪಾಲಕ್ಕಾಡ್–ಶೊರನೂರ–ಕಣ್ಣೂರು–ತೋಕೂರು–ಮುರುಡೇಶ್ವರ ಮಾರ್ಗವಾಗಿ ಸಂಚರಿಸಲಿದೆ.
ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಆಗಮಿಸುವ ಮುನ್ನ ರೈಲ್ವೆಯ ಅಧಿಕೃತ ಸಹಾಯವಾಣಿ ಹಾಗೂ ಪ್ರಕಟಣೆಗಳನ್ನು ಪರಿಶೀಲಿಸಿ ಪ್ರಯಾಣ ಬೆಳೆಸುವಂತೆ ಕೋರಲಾಗಿದೆ.