ಹುಣಸೂರು ಅಗಸ್ಟ್ 02: ತಿಂಡಿ ಪ್ಯಾಕೆಟ್ನಲ್ಲಿದ್ದ ಸಣ್ಣ ಪ್ಲಾಸ್ಟಿಕ್ ಆಟಿಕೆ ಚೆಂಡನ್ನು ಆಕಸ್ಮಿಕವಾಗಿ ನುಂಗಿದ ಪರಿಣಾಮ ಐದು ವರ್ಷದ ಬಾಲಕನೋರ್ವ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟ ಘಟನೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಸಂಭವಿಸಿದೆ. ಮೃತ ಮಗುವನ್ನು ಮುಕುಂದ್ ಮಯೂರ್ (5) ಎಂದು ಗುರುತಿಸಲಾಗಿದೆ. ಈತ ಸಂತೋಷ್ ಮತ್ತು ಐಶ್ವರ್ಯ ದಂಪತಿಯ ಏಕೈಕ ಪುತ್ರ .

ಶನಿವಾರ ಮಗು ಅಳುತ್ತಿದ್ದಾಗ ಸಂಬಂಧಿಕರ ಮಕ್ಕಳು ಗೌರಿಪುರದ ಅಂಗಡಿಯಿಂದ ತಿಂಡಿ ಪೊಟ್ಟಣವನ್ನು ಕೊಡಿಸಿದ್ದರು. ಮಕ್ಕಳನ್ನು ಆಕರ್ಷಿಸಲು ತಿಂಡಿ ತಯಾರಿಕಾ ಕಂಪನಿಯು ಪ್ಯಾಕೆಟ್ನೊಳಗೆ ನೀಡಿದ್ದ ಸಣ್ಣ ಪ್ಲಾಸ್ಟಿಕ್ ಗಿಫ್ಟ್ ಚೆಂಡನ್ನು (Gift Ball) ಪ್ಯಾಕೆಟ್ ನಲ್ಲಿದ್ದ ತಿಂಡಿ ತಿಂದ ಬಳಿಕ ಮಗು ಬಾಯಿಗೆ ಹಾಕಿಕೊಂಡಿದೆ. ಈ ವೇಳೆ ಆಕಸ್ಮಿಕವಾಗಿ ಚೆಂಡು ಗಂಟಲಿನಲ್ಲಿ ಸಿಲುಕಿಕೊಂಡಿದೆ.
ಇದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣವೇ ಮಗುವನ್ನು ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ, ಅಷ್ಟರಲ್ಲಾಗಲೇ ಮಗು ಉಸಿರುಗಟ್ಟಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಘಟನೆ ಕುರಿತು ಹುಣಸೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.