ಮಂಗಳೂರು ಅಗಸ್ಟ್ 02: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಅಬ್ಬರ ಮುಂದುವರಿದಿದ್ದು, ಮಂಗಳೂರು ನಗರದ ಮಣ್ಣಗುಡ್ಡೆಯಲ್ಲಿ ಶನಿವಾರ ತಡರಾತ್ರಿ ಬೃಹತ್ ಮರವೊಂದು ಬುಡಸಮೇತ ರಸ್ತೆಗೆ ಉರುಳಿಬಿದ್ದಿದೆ. ಈ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಸವಾರನೋರ್ವ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಜೀವಪಾಯದಿಂದ ಪಾರಾಗಿದ್ದಾರೆ.

ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ: ಶನಿವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಮಣ್ಣಗುಡ್ಡೆಯಲ್ಲಿ ರಸ್ತೆ ಬದಿಯಲ್ಲಿದ್ದ ದೊಡ್ಡ ಮರ ಏಕಾಏಕಿ ಧರೆಗೆುರುಳಿದೆ. ಅದೇ ಕ್ಷಣದಲ್ಲಿ ಆ ರಸ್ತೆಯಲ್ಲಿ ಸಾಗುತ್ತಿದ್ದ ದ್ವಿಚಕ್ರ ವಾಹನ ಸವಾರನ ತೀರಾ ಹತ್ತಿರದಲ್ಲೇ ಮರ ಬಿದ್ದಿದೆಯಾದರೂ, ಸವಾರ ಸಮಯಪ್ರಜ್ಞೆಯಿಂದ ಬೈಕ್ ಚಲಾಯಿಸಿ ಅಪಾಯದಿಂದ ಪಾರಾಗಿದ್ದಾರೆ.

ಈ ಇಡೀ ಭೀಕರ ಘಟನೆಯ ದೃಶ್ಯವು ಹತ್ತಿರದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮರ ಬಿದ್ದ ಪರಿಣಾಮ ರಸ್ತೆ ಸಂಚಾರ ಹಾಗೂ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿತ್ತು. ಬಳಿಕ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಮರವನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.