ಉಡುಪಿ ಜುಲೈ 31: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದ್ವೇಷಪೂರಿತ ಹೇಳಿಕೆ ಹಾಗೂ ನೀಟ್ (NEET) ವಿದ್ಯಾರ್ಥಿ ಚಳವಳಿಯನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರ ನಡೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಶುಕ್ರವಾರ (ಜುಲೈ 31) ನಗರದ ಹಳೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಧರಣಿ ಸ್ಥಳದಲ್ಲಿ ಶಾಸಕ ಯಶ್ಪಾಲ್ ಸುವರ್ಣ ಅವರನ್ನು ರಾವಣನಂತೆ ಬಿಂಬಿಸಿ ಹಾಕಲಾಗಿದ್ದ ಪೋಸ್ಟರ್ಗಳು ಸಾರ್ವಜನಿಕರ ಗಮನ ಸೆಳೆದವು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ವಾಗ್ಮಿ ನಿಕೇತ್ರಾಜ್ ಮೌರ್ಯ, “ರಾಹುಲ್ ಗಾಂಧಿ ಅವರ ಕುಟುಂಬವನ್ನು ಧ್ವಂಸ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅವರು ಭಾರತದ ಭಯರಹಿತ, ಸತ್ಯ, ನ್ಯಾಯ ಹಾಗೂ ಗಾಂಧಿಗಿರಿಯ ಧ್ವನಿಯಾಗಿದ್ದಾರೆ. ಆದರೆ ಶಾಸಕ ಯಶ್ಪಾಲ್ ಸುವರ್ಣ ಗೂಂಡಾಗಿರಿಯ ಧ್ವನಿಯಾಗಿದ್ದಾರೆ. ಗಾಂಧಿಯನ್ನು ಕಂಡು ಗೋಡ್ಸೆಗೆ ಆಗುತ್ತಿದ್ದ ಭಯ ಇಂದು ಬಿಜೆಪಿಗೆ ಆಗುತ್ತಿದೆ ಎಂದರು.