ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಚ್ಚರಿಕೆಯ ಬೆನ್ನಲ್ಲೇ, ಇರಾನ್ನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದರೆ ಅಷ್ಟೇ ಪ್ರಬಲ ಪ್ರತ್ಯುತ್ತರ ನೀಡುವುದಾಗಿ ಟೆಹ್ರಾನ್ ಕಠಿಣ ತಿರುಗೇಟು ನೀಡಿದೆ. ಇದರೊಂದಿಗೆ ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ನೌಕಾಯಾನ ಹಾಗೂ ತೈಲ ಸಾಗಣೆ ಕುರಿತಾದ ಉದ್ವಿಗ್ನತೆ ಸಾರ್ವಕಾಲಿಕ ಮಟ್ಟಕ್ಕೆ ತಲುಪಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ಮೇಲೆ ಇರಾನ್ ಕ್ಷಿಪಣಿ ಅಥವಾ ಡ್ರೋನ್ ದಾಳಿ ನಡೆಸಿದರೆ, ಪ್ರತಿಯಾಗಿ ಇರಾನ್ನ ಸೇತುವೆಗಳು ಮತ್ತು ವಿದ್ಯುತ್ ಸ್ಥಾವರಗಳಂತಹ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸುವುದಾಗಿ ಟ್ರಂಪ್ ಘೋಷಿಸಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, “ನಮ್ಮ ರಕ್ಷಣಾ ಸಿದ್ಧಾಂತ ಸ್ಪಷ್ಟವಾಗಿದೆ – ಕಣ್ಣಿಗೆ ಕಣ್ಣು. ಇರಾನ್ನ ಮೂಲಸೌಕರ್ಯಗಳ ಮೇಲೆ ಯಾವುದೇ ದಾಳಿ ನಡೆದರೂ ಅದಕ್ಕೆ ಪ್ರಬಲ ಮತ್ತು ನಿರ್ಣಾಯಕ ಪ್ರತಿಕ್ರಿಯೆ ನೀಡಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಗರ್ ಖಾಲಿಬಾಫ್ ಮಾತನಾಡಿ, “ಇರಾನ್ಗೆ ತೈಲ ಮಾರಾಟ ಮಾಡಲು ಅವಕಾಶ ನೀಡದಿದ್ದರೆ, ಮಧ್ಯಪ್ರಾಚ್ಯದ ಯಾವುದೇ ದೇಶಕ್ಕೂ ತೈಲ ಮಾರಾಟ ಮಾಡಲು ಬಿಡುವುದಿಲ್ಲ” ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ಈ ಪ್ರದೇಶದಲ್ಲಿ ಅಮೆರಿಕದ ಸೇನಾ ಉಪಸ್ಥಿತಿ ಸಂಪೂರ್ಣವಾಗಿ ಕೊನೆಗೊಂಡಾಗ ಮಾತ್ರ ನೈಜ ಭದ್ರತೆ ಸಾಧ್ಯ ಎಂದು ಅವರು ಪ್ರತಿಪಾದಿಸಿದ್ದಾರೆ. ಈ ಬೆಳವಣಿಗೆಗಳು ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ.