LATEST NEWS
ಉಪಮುಖ್ಯಮಂತ್ರಿಗಳ ಬಂದೋಬಸ್ತ್ ಗೆ ತುಂಬು ಗರ್ಭಿಣಿ ಪೊಲೀಸ್ ಸಿಬ್ಬಂದಿಯನ್ನು ತಂದು ನಿಲ್ಲಿಸಿದ ಪೊಲೀಸರು

ಉಪಮುಖ್ಯಮಂತ್ರಿಗಳ ಬಂದೋಬಸ್ತ್ ಗೆ ತುಂಬು ಗರ್ಭಿಣಿ ಪೊಲೀಸ್ ಸಿಬ್ಬಂದಿಯನ್ನು ತಂದು ನಿಲ್ಲಿಸಿದ ಪೊಲೀಸರು
ಮಂಗಳೂರು ಅಕ್ಟೋಬರ್ 26: ಉಪಮುಖ್ಯಮಂತ್ರಿ ಬಂದೋಬಸ್ತ್ ಗಾಗಿ 9 ತಿಂಗಳ ತುಂಬು ಗರ್ಭಿಣಿಯೊಬ್ಬರನ್ನು ಉರಿಬಿಸಿಲಿನಲ್ಲಿ ನಿಲ್ಲಿಸಿದ ಪೊಲೀಸರ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 25 ರಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯ ಭೇಟಿ ಸಂದರ್ಭ ಈ ಘಟನೆ ನಡೆದಿದೆ. 9 ತಿಂಗಳು ತುಂಬಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಉರಿಬಿಸಿಲಿನಲ್ಲಿ ನಿಲ್ಲಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆ ಕುರಿತಂತೆ ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಅವರು ಈಗಾಗಲೇ ಮುಲ್ಕಿ ಪೊಲೀಸ್ ಠಾಣೆಯಿಂದ ವರದಿ ಕೇಳಿದ್ದು, ಗರ್ಭಿಣಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಈ ಕೂಡಲೇ ರಜೆಯಲ್ಲಿ ಕಳುಹಿಸಬೇಕೆಂದು ಆದೇಶಿಸಿದ್ದಾರೆ. ಅಲ್ಲದೆ ಈ ಘಟನೆ ಕುರಿತಂತೆ ವಿಷಾದ ವ್ಯಕ್ತಪಡಿಸಿದ್ದು, ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದಕ್ಕೆ ಅವರು ವಿಷಾಧ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ಪತ್ರ ಈಗ ಭಾರಿ ವೈರಲ್ ಆಗಿದ್ದು, ಪೊಲೀಸ್ ವ್ಯವಸ್ಥೆಯ ಬೆಳಕು ಚೆಲ್ಲಿದೆ.
ವೈರಲ್ ಆಗಿರುವ ಪತ್ರ
” ಇಂದು ಮಧ್ಯಾಹ್ನ 25-10-2019 ರಂದು ಮುಲ್ಕಿ ಬಸ್ ನಿಲ್ದಾಣದಲ್ಲಿ ಅಚಾನಕ್ ಆಗಿ ನೋಡಿದಾಗ ತುಂಬು ಗರ್ಭಿಣಿ ಒಬ್ಬರು ಲಾಠಿ ಹಿಡಿದು ಉಪಮುಖ್ಯಮಂತ್ರಿ ಯವರ ಬಂಧೋಬಸ್ತಿಗಾಗಿ ಉರಿಬಿಸಿಲಿನಲ್ಲಿ ನಿಂತಿರುವುದನ್ನು ನೋಡಿದಾಗ ಕರುಳು ಹಿಂಡಿದಂತಾಯ್ತು.
ಹತ್ತಿರ ಹೋಗಿ ಎಷ್ಟು ತಿಂಗಳು ಎಂದು ಕೇಳಿದಾಗ ಅವರು 9 ತಿಂಗಳು ಎಂದರು ಕೇಳಿ ಒಮ್ಮೆ ತಲೆ ಗಿರ್ ಎಂದಿತು.
ಸ್ವಾಮೀ ಪೊಲೀಸರು ಇರುವುದು ಸಾರ್ವಜನಿಕರ ರಕ್ಷಣೆಗೆ ಸರಿ ಆದರೆ ಇಲಾಖೆಯಲ್ಲಿರುವ ಅಸಹಾಯಕ ಪೊಲೀಸ್ ಹೆಣ್ಣು ಮಕ್ಕಳ ರಕ್ಷಣೆ ಮಾಡುವವರು ಯಾರು? ತುಂಬು ಗರ್ಭಿಣಿಯನ್ನು ಸುಮಾರು 3 ತಾಸುಗಳ ಕಾಲ ಬೀದಿಯಲ್ಲಿ ನಿಲ್ಲಿಸಿದ್ದಿರಲ್ಲ ನಿಮಗೆ ಕಣ್ಣಿಲ್ಲವೋ, ಕರುಣೆ ಇಲ್ಲವೋ ಅಥವಾ ನಿಮ್ಮ ಮನೆಯಲ್ಲಿ ಹೆಣ್ಣೇ ಇಲ್ಲವೋ? ನಾಚಿಕೆಯಾಗಬೇಕು ಈ ಗರ್ಭಿಣಿ ಹೆಣ್ಣುಮಗಳನ್ನು ಬೀದಿಯಲ್ಲಿ ನಿಲ್ಲಿಸಿ ಕರ್ತವ್ಯ ನಿರ್ವಹಿಸಲು ಹೇಳಿರುವ ಅಧಿಕಾರಿಗಳಿಗೆ. ನೀವೂ ಒಬ್ಬ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದೀರಲ್ಲವೇ,ನಿಮಗೂ ಅಕ್ಕ ತಂಗಿಯರಿದ್ದಾರಲ್ಲವೇ ನಿಮ್ಮ ಮನೆಯ ಹೆಣ್ಣು ಮಕ್ಕಳು ಇದೇ ಹೆಣ್ಣು ಮಗಳ ರೀತಿ ಬೀದಿಯಲ್ಲಿ ನಿಂತಿರುವುದನ್ನು ನೋಡಿದಾಗ ನಿಮಗೆ ಖುಷಿಯಾಗಿರುತ್ತಿತ್ತೇ? ಹೇಳಿ ಸ್ವಾಮೀ ಹೇಳಿ.
ಇತ್ತೀಚೆಗೆ ಪೊಲೀಸ್ ನೇಮಕಾತಿ ಬಗ್ಗೆ ನಿಮ್ಮ ಇಲಾಖೆಯವರು ಎಲ್ಲೆಲ್ಲೂ ಪ್ರಚಾರ ಮಾಡುತ್ತಿದ್ದೀರ ಪೊಲೀಸ್ ಇಲಾಖೆಗೆ ಸೇರಿ ಎನ್ನುವ ಬದಲು ನಿಮ್ಮ ಮಕ್ಕಳನ್ನು ಇದೇ ರೀತಿ ಬೀದಿಯಲ್ಲಿ ನಿಲ್ಲಿಸಿ ಎಂದು ಹೇಳಿದರೆ ತುಂಬಾ ಚೆನ್ನಾಗಿ ಅರ್ಥವಾಗುತ್ತಿತ್ತು ನಮಗೆ. ಮೊದಲು ನಿಮ್ಮ ಇಲಾಖೆಯನ್ನು ಸುಧಾರಿಸಿಕೊಳ್ಳಿ ನಂತರ ಸಮಾಜದಲ್ಲಿನ ಜನರನ್ನು ಸುಧಾರಿಸಲು ಬನ್ನಿ ನಾಚಿಕೆಯಾಗಬೇಕು ನಿಮಗೆಲ್ಲ.
ತುಂಬು ಗರ್ಭಿಣಿ ಎಂದು ನೋಡದೆ ಆ ಹೆಣ್ಣುಮಗಳನ್ನು ಮಳೆಯಲ್ಲಿ ನಿಲ್ಲಿಸಿದ್ದೀರಲ್ಲ ಏನನ್ನಬೇಕೋ ತಿಳಿಯದಾಗಿದೆ. ಸ್ವಾಮೀ ನನ್ನದೊಂದೇ ಪ್ರಶ್ನೆ ಈ ಗರ್ಭಿಣಿ ಹೆಣ್ಣುಮಗಳ ಬದಲಿಗೆ ಬೇರೆ ಯಾರಾದರೂ ಕರ್ತವ್ಯಕ್ಕೆ ಬಂದಿದ್ದರೆ ಆಗುತ್ತಿರಲಿಲ್ಲವೇ, ಇಲ್ಲ ಉಪಮುಖ್ಯಮಂತ್ರಿಗಳು ತುಂಬು ಗರ್ಭಿಣಿಯೇ ಕರ್ತವ್ಯಕ್ಕೆ ಹಾಕಿ ಎಂದು ಹೇಳಿದ್ದರೆ, ಇಲ್ಲ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಬೇರೆ ಸಿಬ್ಬಂದಿಗಳೆ ಇಲ್ಲವೇ ಅಥವಾ ಇವರಿಲ್ಲದೇ ಹೋಗಿದ್ದಲ್ಲಿ ಪ್ರಳಯವಾಗುತ್ತಿತ್ತೆ ಸಾಕು ಮಾಡಿ ಇನ್ನು ಮುಂದೆಯಾದರೂ ಈ ತರಹದ ಗರ್ಭಿಣಿಯರನ್ನು ಬೀದಿಯಲ್ಲಿ ನಿಲ್ಲಿಸುವುದನ್ನು ತಪ್ಪಿಸಿ ಇಲ್ಲದೇ ಹೋದಲ್ಲಿ ಇಂತಹ ಹೆಣ್ಣುಮಕ್ಕಳ ಕಣ್ಣೀರಿನ ಶಾಪ ನಿಮಗೆ ತಾಗದೇ ಇರದು
ಇಂತಿ
ಸಹೃದಯಿ