UDUPI
ಪಡುಕೆರೆ ಸಂರಕ್ಷಣೆಗೆ 78 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ತಡೆಗೋಡೆ
ಪಡುಕೆರೆ ಸಂರಕ್ಷಣೆಗೆ 78 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ತಡೆಗೋಡೆ
ಉಡುಪಿ, ಅಕ್ಟೋಬರ್ 16: ಕರಾವಳಿ ತೀರ ಪ್ರದೇಶ ಪಡುಕೆರೆಯಲ್ಲಿ ವಾಸಿಸುವ ಜನರ ಬದುಕು ಮಳೆಗಾಲದಲ್ಲಿ ಆತಂಕದಿಂದ ಕೂಡಿದ್ದು, ಅವರಿಗೆ ಭದ್ರತೆ ನೀಡಲು ಉಳ್ಳಾಲದಿಂದ ಶೀರೂರುವರೆಗೆ ಎಡಿಬಿ ನೆರವಿನಿಂದ ಶಾಶ್ವತ ತಡೆಗೋಡೆ ನಿರ್ಮಿಸಲಾಗುತ್ತಿದೆ ಎಂದು ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಹೇಳಿದರು.
ಪಡುಕೆರೆ ಸಮುದ್ರ ಕಿನಾರೆಯ ಶಾಶ್ವತ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು, ವೈಜ್ಞಾನಿಕ ತಂತ್ರಜ್ಞಾನದ ಮೂಲಕ ನಿರ್ಮಿಸಲು ಸುಮಾರು 90 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿಸಿದ್ದು, ಟೆಂಡರ್ ಮೂಲಕ 78 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಗುತ್ತಿಗೆ ನೀಡಲಾಗಿದ್ದು ಕಾಪು ವಿಧಾನ ಸಭೆಯ ಶಾಸಕ ವಿನಯ್ ಕುಮಾರ್ ಸೊರಕೆಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಐದು ಕಿ.ಮೀ ವ್ಯಾಪ್ತಿಯ ಈ ಪ್ರದೇಶಕ್ಕೆ 90 ಕೋಟಿ ರೂ. ಅನುದಾನ ಮೀಸಲಿಡಲು ಶಾಸಕರ ಮುತುವರ್ಜಿಯೇ ಕಾರಣ ಎಂದರು.
ಅವರಿಂದು ಮಟ್ಟುವಿನ ರಾಮಭಕ್ತ ಭಜನಾ ಮಂದಿರದ ಬಳಿ ಆಯೋಜಿಸಲಾದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ರಾಜ್ಯ ಸರ್ಕಾರ ಉಳ್ಳಾಲದಿಂದ ಶಿರೂರುವರೆಗಿನ ಕಡಲ್ಕೊರೆತವಾಗುವ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, 900ಕೋಟಿ. ರೂ ವೆಚ್ಚದಲ್ಲಿ ಎಡಿಬಿ ಯೋಜನೆಯ ಮೂಲಕ ರಾಜ್ಯಸರ್ಕಾರದ ಅನುಮತಿಯ ಮೇರೆಗೆ ಕಾರ್ಯವನ್ನು ಕೈಗೊಳ್ಳಲಾಗಿದೆ. 17 ಕೋಟಿ.ರೂ ವೆಚ್ಚದಲ್ಲಿ ಈಗಾಗಲೇ ಪಡುಕೆರೆ ಸೇತುವೆ ನಿರ್ಮಾಣ ಕಾರ್ಯವು ಸಂಪೂರ್ಣಗೊಂಡಿದೆ. ನರ್ಮ್ ಬಸ್‍ಗಳ ಸೇವೆಯನ್ನು ಕೂಡ ಪಡುಕೆರೆ ಜನರು ಪಡೆದುಕೊಳ್ಳುತ್ತಿದ್ದಾರೆಂದು ಹೇಳಿದರು.
ಆತಂಕದಲ್ಲಿರುವವರಿಗೆ ಆತ್ಮವಿಶ್ವಾಸ
ಕಾಪು ಶಾಸಕ ವಿನಯ ಕುಮಾರ್ ಸೊರಕೆ ಅವರು ಮಾತನಾಡಿ, ಪಡುಕೆರೆಯ ಜನರು ಮಳೆಗಾಲದಲ್ಲಿ ಆತಂಕದ ಬದುಕು ನಡೆಸುತ್ತಿದ್ದರು. ಈಗ ತಡೆಗೋಡೆ ನಿರ್ಮಾಣ ಕಾರ್ಯವು ಕೈಗೊಳ್ಳಲಿರುವುದರಿಂದ ಭದ್ರತೆಯ ಬದುಕನ್ನು ಸಾಗಿಸಬಹುದಾಗಿದೆ. ಮಳೆಗಾಲದಲ್ಲಿ ಮಾತ್ರ ಕಡಲ್ಕೊರೆತದ ಬಗ್ಗೆ ಚಿಂತಿಸದೆ ಪಡುಕೆರೆಯ ಜನರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗುವುದು.
ಕಾಮಗಾರಿ ಶಿಲಾನ್ಯಾಸ ಕಾರ್ಯಕ್ರಮ ಸ್ಥಳೀಯರಿಗೆ ಕಾಮಗಾರಿ ಬಗ್ಗೆ ಮಾಹಿತಿ ಇರಲಿ. ಜನಜಾಗೃತಿಯಾಗಲಿ ಎಂಬುದೇ ಉದ್ದೇಶ ಎಂದು ಸ್ಪಷ್ಟ ಪಡಿಸಿದ ಶಾಸಕರು, ಪಡುಬಿದ್ರೆಯಂತೆ ಪಡುಕೆರೆಯನ್ನು ಪ್ರವಾಸೋದ್ಯಮ ವ್ಯಾಪ್ತಿಗೆ ಒಳಪಡಿಸುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ 110 ಮೀನುಗಾರರಿಗೆ ಸಾಧ್ಯತಾ ಪತ್ರವನ್ನು ವಿತರಿಸಲಾಗಿದ್ದು, ಮೀನುಗಾರಿಕೆಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಲಾಗಿದೆ ಎಂದು ಕಾಪು ವಿಧಾನ ಸಭೆಯ ಶಾಸಕ ವಿನಯ್ ಕುಮಾರ್ ಸೊರಕೆ ಹೇಳಿದರು. ಪಡುಕೆರೆಯಿಂದ ಹೆಜಮಾಡಿಯವರೆಗೆ ಸಂಪರ್ಕ ರಸ್ತೆಗೆ ಆದ್ಯತೆ ನೀಡಲಾಗಿದ್ದು, ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ ಇಲ್ಲಿ ರಸ್ತೆ ಕಾಂಕ್ರೀಟಿಕರಣಗೊಂಡಿದೆ. ಹೆಜಮಾಡಿ ಕ್ರೀಡಾಂಗಣಕ್ಕೂ ಮೂರು ಕೋಟಿ ರೂ. ನೀಡಲು ಕ್ರೀಡಾ ಸಚಿವರು ಸಮ್ಮತಿಸಿದ್ದಾರೆ ಎಂದರು. ಒಟ್ಟಿನಲ್ಲಿ ಪಡುಕೆರೆ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಸಚಿವರು ನುಡಿದರು.
ಕಟಪಾಡಿಯಿಂದ ಬರುವ ರಸ್ತೆಯನ್ನು ಅಗಲ ಮಾಡುವ ಯೋಜನೆಯನ್ನು ಹಾಕಲಾಗಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಅಭಿವೃದ್ಧಿ ಸಾಧ್ಯ. ಜನರಿಗೆ ಉದ್ಯೋಗವನ್ನು ಕಲ್ಪಿಸಬಹುದು. ಅದೇ ರೀತಿ ನಗರೋತ್ಥಾನ ಯೋಜನೆಯಡಿ 10ಕೋಟಿ. ರೂ ವೆಚ್ಚದಲ್ಲಿ ಬೀಚ್ ರಸ್ತೆಯನ್ನು ಕೂಡ ಅಭಿವೃದ್ಧಿಗೊಳಿಸಲಾಗುತ್ತಿದೆ. ಮೀನು ಮಾರಾಟ ಮಾಡುವ ಪಡುಕೆರೆ ಮಹಿಳೆಯರಿಗೆ ಮಾರುಕಟ್ಟೆ ನಿರ್ಮಿಸಿ ಕೊಡಲಾಗಿದೆ ಎಂದರು.