LATEST NEWS
75 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ : ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ನವದೆಹಲಿ, ಅಗಸ್ಟ್ 15 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ 7.30ಕ್ಕೆ ದೆಹಲಿಯ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ 75 ನೇ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ.
ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಸತತ 8ನೇ ಬಾರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ಮೂಲಕ ಐತಿಹಾಸಿಕ ಸ್ಮಾರಕ ರೆಡ್ ಫೋರ್ಟ್ನಲ್ಲಿ 8 ಬಾರಿ ತ್ರಿವರ್ಣ ಧ್ವಜ ಹಾರಿಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನ ಮಂತ್ರಿ ಎಂಬ ದಾಖಲೆ ಬರೆದಿದ್ದಾರೆ.

ಮಹಾಮಾರಿ ಕರೊನಾ ವೈರಸ್ ಮೂರನೇ ಅಲೆ ಭೀತಿಯ ನಡುವೆಯೂ ರಾಷ್ಟ್ರವು ಇಂದು 75ನೇ ಸ್ವಾತಂತ್ರ್ಯೋತ್ಸವಕ್ಕೆ ಸಾಕ್ಷಿಯಾಗಿದ್ದು, ಈ ಅಮೃತ ಘಳಿಗೆಯಲ್ಲಿ ದೇಶವ್ಯಾಪಿ ರಾಷ್ಟ್ರಭಕ್ತಿ ಮೊಳಗುತ್ತಿದೆ. ಕೋವಿಡ್ ಮುನ್ನೆಚ್ಛರಿಕಾ ಕ್ರಮದೊಂದಿಗೆ ದೇಶಾದ್ಯಂತ ಸ್ವಾತಂತ್ರ್ಯ ಸಂಭ್ರಮದ ಸರಳ ಆಚರಣೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣಕ್ಕೂ ಮುನ್ನ ರಾಜ್ಘಾಟ್ಗೆ ತೆರಳಿದ ಪ್ರಧಾನಿ ಮೋದಿ, ಗಾಂಧಿ ಸಮಾಧಿಗೆ ಗೌರವ ಸಮರ್ಪಣೆ ಮಾಡಿದರು. ಕೆಂಪುಕೋಟೆಯಲ್ಲಿ ಕೆಲವೇ ಗಣ್ಯರ ಸಮ್ಮುಖದಲ್ಲಿ ಸ್ವಾತಂತ್ರ್ಯ ಸಂಭ್ರಮದ ಸರಳ ಆಚರಣೆ ನಡೆಯುತ್ತಿದೆ.
ರಾಜ್ಘಾಟ್ನಿಂದ ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ಮೋದಿ ಗೌರವ ರಕ್ಷೆಯನ್ನು ಸ್ವೀಕರಿಸಿದರು. ಮೂರು ರಕ್ಷಣಾ ಪಡೆ ಹಾಗೂ ಪೊಲೀಸ್ ತಂಡದಿಂದ ಮೋದಿ ಅವರಿಗೆ ಗೌರವ ಸಲ್ಲಿಸಲಾಯಿತು.75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ಇದು ಅವರ ಸತತ ಎಂಟನೇ ಸ್ವಾತಂತ್ರ್ಯೋತ್ಸವದ ಭಾಷಣವಾಗಿದೆ.