DAKSHINA KANNADA
ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕತೆ ಬಲವರ್ಧನೆ – ಸ್ಲೊವೇನಿಯಾದಲ್ಲಿ ಸಂಸದ ಕ್ಯಾ. ಚೌಟ ಅವರನ್ನು ಒಳಗೊಂಡ ಸರ್ವಪಕ್ಷಗಳ ನಿಯೋಗ

ಸ್ಲೊವೇನಿಯಾ ಮೇ 26: ಭಯೋತ್ಪಾದನೆ ವಿರುದ್ಧ ಭಾರತದ ದೃಢ ಸಂಕಲ್ಪವನ್ನು ಜಾಗತಿಕವಾಗಿ ಎತ್ತಿ ಹಿಡಿಯುವ ಮೂಲಕ ಪಾಕಿಸ್ತಾನದ ನಿಜಬಣ್ಣ ಬಯಲು ಮಾಡುವುದಕ್ಕೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರನ್ನು ಒಳಗೊಂಡ ಸಂಸದೆ ಕನಿಮೋಳಿ ನೇತೃತ್ವದ ಸರ್ವಪಕ್ಷಗಳ ನಿಯೋಗವು ರಷ್ಯಾ ಭೇಟಿ ಬಳಿಕ ಇದೀಗ ಸ್ಲೊವೇನಿಯಾ ದೇಶದಲ್ಲಿದ್ದು, ಇಂದು ಹಲವು ಕಡೆ ಉನ್ನತ ಮಟ್ಟದ ಸಭೆ, ಅಂತಾರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದೆ.
ಸ್ಲೊವೇನಿಯಾ ದೇಶಕ್ಕೆ ಆಗಮಿಸಿದ ನಿಯೋಗವನ್ನು ಅಲ್ಲಿನ ಭಾರತೀಯ ರಾಯಭಾರಿ ಅಧಿಕಾರಿ ಅಮಿತ್ ನಾರಂಗ್ ಅವರು ಬರಮಾಡಿಕೊಂಡಿದ್ದರು. ನಂತರ ಅವರು ಸರ್ವಪಕ್ಷಗಳ ಸಂಸದೀಯ ನಿಯೋಗದ ಜತೆಗೆ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಸ್ಲೊವೇನಿಯಾ ದೇಶವು ಭಾರತದೊಂದಿಗೆ ಬೆಂಬಲವಾಗಿ ನಿಂತಿದ್ದು, ಉಭಯ ದೇಶಗಳ ನಡುವೆ ವೃದ್ದಿಸುತ್ತಿರುವ ಬಾಂಧವ್ಯದ ಕುರಿತು ಸಮಗ್ರ ಮಾಹಿತಿ ಹಂಚಿಕೊಂಡರು.

ಇದಾದ ಬಳಿಕ ಸರ್ವಪಕ್ಷದ ನಿಯೋಗವು ರಾಷ್ಟ್ರೀಯ ಅಸೆಂಬ್ಲಿಯ ವಿದೇಶಾಂಗ ನೀತಿ ಸಮಿತಿಯ ಅಧ್ಯಕ್ಷರಾದ ಹೆಚ್.ಇ. ಪ್ರೆಡ್ರಾಗ್ ಬಕೋವಿಕ್ ಮತ್ತು ಭಾರತ-ಸ್ಲೊವೇನಿಯಾ ಪಾರ್ಲಿಮೆಂಟರಿ ಫ್ರೆಂಡ್ ಶಿಪ್ ಗ್ರೂಪ್ ನ ಮಿರ್ಸ್ಲಾವ್ ಗ್ರೆಗೋರಿಕ್ ಅವರೊಂದಿಗೆ ಸಭೆ ನಡೆಸಿ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಕುರಿತ ಭಾರತದ ಬಲವಾದ ಬದ್ಧತೆ ಕುರಿತು ಮನವರಿಕೆ ಮಾಡಿಕೊಟ್ಟಿದೆ. ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ತಾನದ ಇಬ್ಬಗೆಯ ನೀತಿಯ ಕುರಿತು ಭಾರತದ ಕಳವಳವನ್ನು ಸ್ಲೊವೇನಿಯಾದ ಜನಪ್ರತಿನಿಧಿಗಳು ಹಾಗೂ ಚಿಂತಕರಿಗೆ ಸ್ಪಷ್ಟವಾಗಿ ತಿಳಿಹೇಳಲಾಯಿತು.
ಇದಾದ ಬಳಿಕ ಸ್ಲೊವೇನಿಯಾದ ಪ್ರಧಾನ ಮಂತ್ರಿ ಕಚೇರಿಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಭದ್ರತಾ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಸಂಯೋಜಕರಾದ ಎಚ್.ಇ. ವೋಜ್ಕೊ ವೋಲ್ಕ್ ಅವರೊಂದಿಗೆ ನಿಯೋಗವು ಮಹತ್ವದ ಸಭೆ ನಡೆಸಿದೆ. ನಂತರ ಸ್ಲೊವೇನಿಯಾದ ವಿದೇಶಾಂಗ ಮತ್ತು ಯುರೋಪಿಯನ್ ವ್ಯವಹಾರಗಳ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಬಾರ್ಬರಾ ಜ್ವೊಕೆಲ್ಜ್ ಅವರನ್ನು ನಿಯೋಗ ಭೇಟಿ ಮಾಡಿತು. ಈ ವೇಳೆ ಪಹಲ್ಗಾಮ್ ದಾಳಿಯನ್ನು ಸ್ಲೊವೇನಿಯಾ ಸ್ಪಷ್ಟವಾಗಿ ಖಂಡಿಸುವುದರ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಭಾರತವು ಭಯೋತ್ಪಾದನೆ ವಿರುದ್ಧದ ತಳೆದಿರುವ ನಿಲುವಿಗೆ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಆ ಮೂಲಕ ಭಯೋತ್ಪಾದನೆ ವಿರುದ್ಧದ ಭಾರತದ ದಿಟ್ಟ ಹೋರಾಟದಲ್ಲಿ ಎಲ್ಲ ರೀತಿಯ ಸಹಕಾರದ ಭರವಸೆಯನ್ನು ನೀಡಿದೆ.