DAKSHINA KANNADA
ಕಡಬ – ಪೊಲೀಸ್ ಮತ್ತು ಅರಣ್ಯ ಇಲಾಖೆ ವಾಹನಗಳ ಮೇಲೆ ಕಲ್ಲು ತೂರಾಟ – 7 ಮಂದಿ ಅರೆಸ್ಟ್
ಕಡಬ ಫೆಬ್ರವರಿ 24: ಇಬ್ಬರನ್ನು ಬಲಿ ಪಡೆದ ಕಾಡಾನೆಯನ್ನು ಸೆರೆ ಹಿಡಿದು ದುಬಾರೆ ಆನೆ ಬಿಡಾರಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳ ವಾಹನದ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇಬ್ಬರನ್ನು ಬಲಿ ಪಡೆದ ನರಹಂತಕ ಆನೆಯನ್ನು ಸತತ ಕಾರ್ಯಾಚರಣೆ ಬಳಿಕ ನಿನ್ನೆ ಕೊಂಬಾರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು, ಬಳಿಕ ಈ ಆನೆಯನ್ನು ಅರಣ್ಯಾಧಿಕಾರಿಗಳು ದುಬಾರೆ ಆನೆ ಬಿಡಾರಕ್ಕೆ ಕರೆದೊಯ್ದು ಬಿಟ್ಟ ಬಳಿಕ ಇನ್ನುಳಿದ ಕಾಡಾನೆಗಳನ್ನು ಸೆರೆ ಹಿಡಿಯಲು ನಿರ್ಧರಿಸಿದ್ದರು.
ರಾತ್ರಿ 9 ಗಂಟೆ ಸುಮಾರಿಗೆ ಸೆರೆ ಹಿಡಿದ ಆನೆಯನ್ನು ಲಾರಿ ಕೊಂಡೊಯ್ಯಲು ಮುಂದಾದಾಗ ಸ್ಥಳೀಯರು ಆನೆ ಇದ್ದ ಲಾರಿಯನ್ನು ಅಡ್ಡಗಟ್ಟಿ ಇತರೆ ಕಾಡಾನೆಗಳನ್ನು ಸೆರೆಹಿಡಿದು ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದು ವಾಗ್ವಾದ ಮಾಡಿದ್ದಾರೆ ಎಂದು ಪಂಜ ವಲಯದ ಉಪವಲಯ ಅರಣ್ಯಾಧಿಕಾರಿ ಕಡಬ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಈ ವೇಳೆ ಉಪವಲಯ ಅರಣ್ಯಾಧಿಕಾರಿ ಕಾಡಾನೆಯನ್ನು ಹೆಚ್ಚು ಸಮಯ ಲಾರಿಯಲ್ಲಿ ನಿಲ್ಲಿಸಲು ಆಗುವುದಿಲ್ಲ, ಆದ ಕಾರಣ ಮೊದಲು ಸೆರೆಹಿಡಿದ ಆನೆಯನ್ನು ದುಬಾರೆಗೆ ಬಿಟ್ಟು ಬಂದು ಉಳಿದ ಕಾಡಾನೆಗಳನ್ನು ಸೆರೆಹಿಡಿಯುವುದಾಗಿ ಹೇಳಿದ್ದಾರೆ. ಆದರೆ ನರೆದಿದ್ದ ಜನರು ಇದಕ್ಕೆ ಒಪ್ಪದೆ ಅರಣ್ಯಾಧಿಕಾರಿಗಳೊಂದಿಗೆ ವಾಗ್ವಾದ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಆಕ್ರೋಶಿತ ಜನರಿಗೆ ವಾಸ್ತವ ವಿಚಾರವನ್ನು ಮನವರಿಕೆ ಮಾಡಲು ಯತ್ನಿಸಿದ್ದಾರೆ. ಆದರೆ ಇದಕ್ಕೆ ಒಪ್ಪದ ಕೆಲವರು ಏಕಾಏಕಿ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸರಿಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದಲ್ಲದೆ ಸ್ಥಳದಲ್ಲಿ ನಿಲ್ಲಿಸಿದ್ದ ಅರಣ್ಯ ಇಲಾಖೆಯ ಹಾಗೂ ಪೊಲೀಸ್ ಇಲಾಖೆಯ ವಾಹನಗಳ ಮೇಲೂ ಕಲ್ಲು ತೂರಾಟ ಮಾಡಿ ವಾಹನಗಳನ್ನು ಜಖಂ ಮಾಡಿದ್ದಾರೆ ಎಂದು ಪಂಜ ವಲಯದ ಉಪವಲಯ ಅರಣ್ಯಾಧಿಕಾರಿ ಕಡಬ ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.