LATEST NEWS
ಕಾರಿಗೆ ಒರಗಿ ನಿಂತಿದ್ದಕ್ಕೆ ಬಾಲಕ ಎದೆಗೆ ಒದ್ದ ಕಾರಿನ ಚಾಲಕ….!!

ತಿರುವನಂತಪುರಂ: ಕಾರಿಗೆ ಒರಗಿ ನಿಂತಿದ್ದ 6 ವರ್ಷದ ಬಾಲಕನಿಗೆ ಕಾರಿನ ಚಾಲಕ ಎದೆಗೆ ಒದ್ದ ಘಟನೆ ನಡೆದಿದೆ. ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ.
ವೈರಲ್ ಆಗಿರುವ ವೀಡಿಯೋದಲ್ಲಿ 6 ವರ್ಷದ ಬಾಲಕನೊಬ್ಬ ಕಾರಿಗೆ ಒರಗಿ ನಿಂತಿರುವುದು ಕಂಡುಬಂದಿದೆ. ಇದನ್ನು ಗಮನಿಸಿ, ಕಾರಿನಿಂದ ಹೊರಗೆ ಬಂದ ವ್ಯಕ್ತಿ, ಬಾಲಕನಿಗೆ ಗದರಿ, ಎದೆಗೆ ಕಾಲಿನಿಂದ ಒದ್ದಿದ್ದಾನೆ. ಏನೂ ತಿಳಿಯದ ಬಾಲಕ ಸದ್ದಿಲ್ಲದೆ ಅಲ್ಲಿಂದ ದೂರ ಸರಿದಿದ್ದಾನೆ. ಬಳಿಕ ವ್ಯಕ್ತಿ ಮತ್ತೆ ಕಾರಿನೊಳಗೆ ಹೋಗಲು ಮುಂದಾದಾಗ ಈ ಎಲ್ಲಾ ಘಟನೆಯನ್ನು ವೀಕ್ಷಿಸಿದ ಸ್ಥಳೀಯರು ಆತನನ್ನು ಸುತ್ತುವರಿದಿದ್ದಾರೆ ಹಾಗೂ ಚಾಲಕನನ್ನು ಪ್ರಶ್ನಿಸುವುದು ವೀಡಿಯೋದಲ್ಲಿ ಕಂಡುಬಂದಿದೆ.

ವರದಿಗಳ ಪ್ರಕಾರ ಬಾಲಕ ರಾಜಸ್ಥಾನದ ವಲಸೆ ಕಾರ್ಮಿಕರ ಕುಟುಂಬದವನು ಎಂಬುದು ತಿಳಿದುಬಂದಿದೆ. ಘಟನೆಯ ಕುರಿತು ಪ್ರತ್ಯಕ್ಷದರ್ಶಿ ವಕೀಲರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು, ಬಳಿಕ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲ ಸುದ್ದಿ ವಾಹಿನಿಗಳು ಕೂಡಾ ಇದನ್ನು ವರದಿ ಮಾಡಿದ ಬಳಿಕ ಪೊಲೀಸರು ಆರೋಪಿಯ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಶುಕ್ರವಾರ ಬೆಳಗ್ಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಲಶ್ಶೇರಿ ಶಾಸಕ ಎಎನ್ ಶಂಸೀರ್ ಹೇಳಿದ್ದಾರೆ.