LATEST NEWS
ಕಿಸ್ಸಿಂಗ್ ಪ್ರಕರಣ – 5 ವಿದ್ಯಾರ್ಥಿಗಳು ಅರೆಸ್ಟ್….!!
ಮಂಗಳೂರು ಜುಲೈ 23: ಮಂಗಳೂರಿನ ಖಾಸಗಿ ಕಾಲೇಜಿನ ವಿಧ್ಯಾರ್ಥಿಗಳ ಕಿಸ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 5 ವಿಧ್ಯಾರ್ಥಿಗಳನ್ನು ಬಂಧಿಸಿ ಅವರನ್ನು ಬಾಲನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿದ್ದಾರೆ.
ಸದ್ಯ ನ್ಯಾಯಾಲಯವು ಅವರನ್ನು ಹೆತ್ತವರಿಗೆ ಒಪ್ಪಿಸಿದೆ. ಅಗತ್ಯ ಬಿದ್ದಾಗ ತನಿಖಾಧಿಕಾರಿ ಯವರ ಮುಂದೆ ಹಾಜರಾಗುವಂತೆ ಆದೇಶ ನೀಡಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಬಂಧಿತರಲ್ಲಿ ವೀಡಿಯೋ ಚಿತ್ರೀಕರಣ ಮಾಡಿದವನು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದವನು ಕೂಡ ಸೇರಿದ್ದಾರೆ. ಒಟ್ಟು ಸುಮಾರು 8 ಮಂದಿ ವಿದ್ಯಾರ್ಥಿಗಳು ಈ ಕೃತ್ಯದಲ್ಲಿ ಭಾಗವಹಿಸಿದ್ದು, ಈ ಪೈಕಿ ಓರ್ವ ಈಗಾಗಲೇ ವಿದೇಶಕ್ಕೆ ತೆರಳಿದ್ದಾನೆ. ಮೂವರು ವಿದ್ಯಾರ್ಥಿನಿಯರು ದೌರ್ಜನ್ಯಕ್ಕೊಳಗಾಗಿದ್ದು, ಅವರು ಕೂಡ ಅಪ್ರಾಪ್ತ ವಯಸ್ಕರು ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸುಮಾರು 20 ಸೆಕೆಂಡ್‌ಗಳ ವೀಡಿಯೋ ಹೊರತುಪಡಿಸಿ ಬೇರೆ ಯಾವುದೇ ವೀಡಿಯೋಗಳಿಲ್ಲ. ಇತರ ಕೆಲವು ಅಶ್ಲೀಲ ವೀಡಿಯೋಗಳನ್ನು ಕೆಲವು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಆ ವೀಡಿಯೋ ಮತ್ತು ಚುಂಬನ ಪ್ರಕರಣಕ್ಕೂ ಸಂಬಂಧವಿಲ್ಲ. ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವೀಡಿಯೋ ಹರಿಯಬಿಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.