KARNATAKA
ಫೆಬ್ರವರಿ 16 ರಿಂದ ಧರ್ಮಸ್ಥಳದಲ್ಲಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ
ಫೆಬ್ರವರಿ 16 ರಿಂದ ಧರ್ಮಸ್ಥಳದಲ್ಲಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ
ಮಂಗಳೂರು ಸೆಪ್ಟೆಂಬರ್ 26: ಶ್ರೀಕ್ಷೇತ್ರ ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿರುವ ಭಗವಾನ್ ಬಾಹುಬಲಿ ಸ್ವಾಮಿ ವಿಗ್ರಹಕ್ಕೆ 2019ರ ಫೆಬ್ರವರಿ 16ರಿಂದ ಮಹಾ ಮಸ್ತಕಾಭಿಷೇಕ ನಡೆಯಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿರುವ ಭಗವಾನ್ ಬಾಹುಬಲಿ ಸ್ವಾಮಿ ವಿಗ್ರಹಕ್ಕೆ ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತಿದೆ. ಈ ಹಿಂದೆ 2007ರಲ್ಲಿ ಮಸ್ತಕಾಭಿಷೇಕ ನಡೆದಿತ್ತು. ಈ ಬಾರಿ 2019 ರಲ್ಲಿ 4 ನೇ ಮಹಾ ಮಸ್ತಕಾಭಿಷೇಕ ನಡೆಯಲಿದೆ. ಫೆಬ್ರವರಿ 9 ರಿಂದ ತೋರಣ ಮುಹೂರ್ತ ನಡೆಯಲಿದೆ. ಫೆಬ್ರವರಿ 16 ರಿಂದ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ನಡೆಯಲಿದೆ.
ಕೀರ್ತಿಶೇಷ ಡಿ. ರತ್ನವರ್ಮ ಹೆಗ್ಗಡೆ ಮತ್ತು ರತ್ಮಮ್ಮ ದಂಪತಿಯ ಇಚ್ಚೆಯಂತೆ 1982ರಲ್ಲಿ ಧರ್ಮಸ್ಥಳದಲ್ಲಿ ಡಾ. ಡಿ ವಿರೇಂದ್ರ ಹೆಗ್ಗಡೆ ಅವರು 39 ಅಡಿ ಎತ್ತರದ ವಿಗ್ರಹವನ್ನು ಧರ್ಮಸ್ಥಳದಲ್ಲಿ ಪ್ರತಿಷ್ಠಾಪಿಸಿ, ಅದೇ ವರ್ಷ ಮೊದಲ ಮಹಾಮಸ್ತಕಾಭಿಷೇಕವನ್ನು ನೆರವೇರಿಸಿದರು.
ಪ್ರತಿ 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ಹಾಗೂ ಪ್ರತಿವರ್ಷ ಬಾಹುಬಲಿ ಮೂರ್ತಿಗೆ ಪಾದಾಭಿಷೇಕ ನಡೆಯುತ್ತದೆ. ಈ ಹಿಂದೆ 1994 ಮತ್ತು 2007ರಲ್ಲಿ ಮಹಾಮಸ್ತಕಾಭಿಷೇಕ ನಡೆದಿತ್ತು.
ಈ ಬಾರಿಯ ಮಸ್ತಕಾಭಿಷೇಕದಲ್ಲಿ 5 ದಿನಗಳ ಕಾಲ ಕಲ್ಯಾಣ ಕಾರ್ಯಕ್ರಮಗಳು ಇದ್ದು, ನಂತರ ಮೂರು ದಿನ ಸತತ ಮಸ್ತಕಾಭಿಷೇಕ ನಡೆಯಲಿದೆ. ಅಲ್ಲದೆ ಭಕ್ತರ ಅಪೇಕ್ಷೆ ಮೇರೆಗ ಪ್ರತಿ ಶನಿವಾರ ಮತ್ತು ಭಾನುವಾರು ಮಸ್ತಕಾಭಿಷೇಕ ಮುಂದುವರಿಯುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.