DAKSHINA KANNADA
ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ. ದತ್ತಾ – ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಆಂತರಿಕ ಸಭೆ
ಮಂಗಳೂರು – ಜುಲೈ 14. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆ ನೆಡೆಯುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ. ದತ್ತಾ ಮಂಗಳೂರಿಗೆ ಆಗಮಿಸಿದ್ದಾರೆ. ಡಿಜಿಪಿ ಆರ್.ಕೆ. ದತ್ತಾ ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಆಂತರಿಕ ಸಭೆ ನೆಡೆಸಿದ್ದಾರೆ.
ಈಗಾಗಲೇ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಮೋಹನ್ ಮಂಗಳೂರಿನಲ್ಲಿ ಮೊಕ್ಕಾಂ ಹೂಡಿದ್ದು , ಸಿಐಡಿ ವಿಭಾಗದ ಐಜಿಪಿ ಚಂದ್ರಶೇಖರ್ , ಇಂಟೆಲಿಜೆನ್ಸ್ ವಿಭಾಗದ ಐಜಿಪಿ ಅಮೃತ್ ಪಾಲ್ ಸೇರಿದಂತೆ ಹಿರಿಯ ಪೊಲೀಸ್ ಆಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿರುವ ಖಡಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರಿಂದ ಕಾನೂನು ಸುವ್ಯವಸ್ಥೆ ನೆಲೆಗೊಳಿಸಲು ಸಲಹೆ ಪಡೆಯಲಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿಯೊಂದು ಚಟುವಟಿಕೆಗಳ ಬಗ್ಗೆ ತೀವ್ರಾ ನಿಗಾ ಇರಿಸಲಾಗಿದೆ.
ಡಿಜಿಪಿ ಆರ್.ಕೆ.ದತ್ತಾ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಇಂದು ಗಲಭೆ ನಡೆದ ಬಂಟ್ವಾಳ,ಬಿ.ಸಿ.ರೋಡ್ ಪ್ರದೇಶಗಳಿಗೆ ಭೇಟಿನೀಡಿ ಪರಿಸ್ಥಿತಿಯನ್ನುಅವಲೋಕಿಸಲಿದ್ದಾರೆ. ಅಲ್ಲಿಯೇ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಿರುವ ಆರ್ .ಕೆ. ದತ್ತಾ ಜಿಲ್ಲೆಯಲ್ಲಿ ಈ ವರೆಗೆ ನಡೆದಿರುವ ಅಹಿತಕರ ಘಟನೆ ಸೇರಿದಂತೆ ಆರ್ ಎಸ್ ಎಸ್ ಶರತ್ ಮಡಿವಾಳ ಸಾವಿನ ತನಿಖೆ ಪ್ರಗತಿಯ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.