LATEST NEWS
ಪಿಲಿಕುಳ – 38 ಕಾಳಿಂಗ ಸರ್ಪ ಮರಿಗಳ ಜನನ….!!

ಮಂಗಳೂರು ಜುಲೈ 09: ಪಿಲಿಕುಳ ನಿಸರ್ಗಧಾಮದಲ್ಲಿ ಬರೋಬ್ಬರಿ 38 ಕಾಳಿಂಗ ಸರ್ಪಗಳ ಜನನವಾಗಿದೆ. ನಾಗಮಣೆ ಎಂಬ ಹೆಸರಿನ ಕಾಳಿಂಗ ಸರ್ಪ ಮೊಟ್ಟೆ ಇಟ್ಟಿದ್ದು, ಕೃತಕ ಕಾವು ನೀಡಿ ಇದೀಗ 38 ಮರಿಗಳ ಜನನವಾಗಿದೆ.
ಸಂಪಾಜೆ ಪರಿಸರದಲ್ಲಿ ಸೆರೆ ಹಿಡಿದಿದ್ದ ಎಂಟು ವರ್ಷದ ನಾಗಮಣಿ ಮತ್ತು ಪಿಲಿಕುಳದಲ್ಲಿ ಹುಟ್ಟಿದ್ದ 10 ವರ್ಷದ ನಾಗೇಂದ್ರನ ಸಂಯೋಗದಲ್ಲಿ ಈ ಮರಿಗಳು ಜನಿಸಿವೆ ಎಂದು ಜೈವಿಕ ಉದ್ಯಾನದ ನಿರ್ದೇಶಕ ಎಚ್. ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ. ಕೇಂದ್ರ ಮೃಗಾಲಯ ಪ್ರಾಧಿಕಾರವು 2007 ನವೆಂಬರ್‌ನಲ್ಲಿ ಪಿಲಿಕುಳವನ್ನು ಬಂಧಿತ ಸಂತಾನೋತ್ಪತ್ತಿಯ ಕೇಂದ್ರವೆಂದು ಗುರುತಿಸಿದೆ. ಆನಂತರ ಇಲ್ಲಿಗೆ ಕಾಳಿಂಗ ಸರ್ಪ ತಳಿ ಸಂವರ್ಧನಾ ಕೇಂದ್ರ ನಿರ್ಮಾಣಕ್ಕೆ ಅನುದಾನ ದೊರೆತಿದೆ. ಇಲ್ಲಿ 100ಕ್ಕೂ ಹೆಚ್ಚು ಕಾಳಿಂಗ ಸರ್ಪಗಳು ಇದ್ದವು. 2010ರಲ್ಲಿ 100ಕ್ಕೂ ಅಧಿಕ ಮೊಟ್ಟೆಗಳನ್ನು ಇಟ್ಟಿದ್ದವು. ಪ್ರಾಣಿ ವಿನಿಮಯದ ಭಾಗವಾಗಿ ಬೇರೆ ಮೃಗಾಲಯಗಳಿಗೆ ಇವನ್ನು ಕಳುಹಿಸಲಾಯಿತು. ಕೆಲವನ್ನು ಕಾಡಿಗೆ ಬಿಡಲಾಯಿತು. ಪ್ರಸ್ತುತ ಇರುವ 14 ಕಾಳಿಂಗ ಸರ್ಪಗಳಲ್ಲಿ ಐದು ಹೆಣ್ಣು, ಉಳಿದವು ಗಂಡು ಆಗಿವೆ.
