LATEST NEWS
ವಿಷವುಣಿಸಿ ಮಂಗಗಳ ಮಾರಣಹೋಮ
ವಿಷವುಣಿಸಿ ಮಂಗಗಳ ಮಾರಣಹೋಮ
ಉಡುಪಿ ಅಕ್ಟೋಬರ್ 27: ದುಷ್ಕರ್ಮಿಗಳ ಹುಚ್ಚಾಟಕ್ಕೆ 20ಕ್ಕೂ ಹೆಚ್ಚು ಮಂಗಗಳು ಪ್ರಾಣ ತೆತ್ತ ಮನಕಲುಕುವ ಘಟನೆ ಉಡುಪಿ ಜಿಲ್ಲೆಯ ಗಡಿ ಭಾಗದಲ್ಲಿ ನಡೆದಿದೆ. ಉಡುಪಿ ಕಾರ್ಕಳ ತಾಲೂಕಿನ ಸೀತಾ ನದಿ ನಾಡ್ಪಾಲು ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಆಗುಂಬೆ ಘಾಟಿಯಲ್ಲಿ ನಿನ್ನೆ ತಡರಾತ್ರಿ ಹೃದಯ ವಿದ್ರಾವಕ ಘಟನೆ ನಡೆದಿದೆ.
ಆಗುಂಬೆ ಘಾಟಿಯ ರಸ್ತೆ ಬದಿಯಲ್ಲಿ ಈ ಮನಕಲುಕುವ ದೃಶ್ಯ ಕಂಡುಬಂದಿದ್ದು ಯಾರೋ ದುಷ್ಕರ್ಮಿಗಳು ಈ ಮಂಗಗಳಿಗೆ ಆಹಾರದಲ್ಲಿ ವಿಷ ಬೆರೆಸಿ ಕೊಟ್ಟಿರುವ ಶಂಕೆ ವ್ಯಕ್ತವಾಗಿದೆ.
ಕಾಡು ನಾಶದ ಬಳಿಕ ಆಹಾರವನ್ನು ಹುಡುಕಿಕೊಂಡು ನಾಡಿಗೆ ಬಂದ ಮಂಗಗಳಿಗೆ ಈ ವಿಷವುಣಿಸುವ ಕೆಲಸ ನಡೆದಿರಬಹುದೆಂಬ ಅನುಮಾನ ವ್ಯಕ್ತಪಡಿಸಲಾಗಿದೆ. ಮಂಗಗಳ ನರಳಾಟವನ್ನು ಕಂಡ ಸ್ಥಳೀಯ ಯುವಕರ ತಂಡ ಹಾಗೂ ಕೆಲವು ಪ್ರಯಾಣಿಕರು ಮಂಗಗಳಿಗೆ ನೀರು ಕುಡಿಸಿ ಬದುಕಿಸಲು ಬಹಳ ಪ್ರಯತ್ನ ಪಟ್ಟರೂ ವಿಫಲವಾಗಿದೆ.
ರಸ್ತೆ ಬದಿಯಲ್ಲಿ ಎಲ್ಲಾ ಮಂಗಗಳು ಸತ್ತು ಬಿದ್ದಿದ್ದು ಅವುಗಳ ಮೂಕ ರೋಧನೆಗೆ ಸಾಕ್ಷಿಯಾಗಿತ್ತು .ಇತ್ತೀಚೆಗೆ ಹೆಬ್ರಿ ಬಳಿಯ ಕಬ್ಬಿನಾಲೆ ಎಂಬಲ್ಲಿ ಇದೇ ರೀತಿ ಯಾರೋ ಕಿಡಿಗೇಡಿಗಳು ಮಂಗಗಳಿಗೆ ವಿಷ ಉಣಿಸಿ ರಸ್ತೆ ಬದಿಯಲ್ಲಿ ಹಾಕಿದ ಘಟನೆ ನಡೆದಿತ್ತು.
ಈ ಘಟನೆ ಬಗ್ಗೆ ಅರಣ್ಯ ಇಲಾಖೆಯವರು ಗಮನಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಹೆಬ್ರಿ ವಲಯ ವನ್ಯಜೀವಿ ಇಲಾಖೆಯ ಸಿಬ್ಬಂದಿಗಳು ಆಗಮಿಸಿ ಮಂಗಗಳ ವಿಲೇವಾರಿ ಮಾಡಿದ್ದಾರೆ.