Connect with us

KARNATAKA

ನಿರಂತರ 170 ಗಂಟೆ ಭರತನಾಟ್ಯ: ವಿಶ್ವ ದಾಖಲೆ ಬರೆದ ಮಂಗಳೂರಿನ ವಿದ್ಯಾರ್ಥಿನಿ ರೆಮೋನಾ ಪಿರೇರಾ

ಮಂಗಳೂರು, ಜುಲೈ 28: ನಿರಂತರವಾಗಿ ಏಳು ದಿನಗಳ ಕಾಲ ರಾತ್ರಿ ಹಗಲೆನ್ನದೆ ದಿನವಿಡೀ 170 ಗಂಟೆಗಳ ಭರತನಾಟ್ಯ ಪ್ರದರ್ಶಿಸುವ ಮೂಲಕ ಮಂಗಳೂರಿನ ವಿದ್ಯಾರ್ಥಿನಿ ರೆಮೋನಾ ಪಿರೇರಾ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಅಂತಿಮ‌ ಬಿಎ ವಿದ್ಯಾರ್ಥಿನಿ ರೆಮೋನಾ ಸಾಧನೆ ಈಗ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರ್ಪಡೆಯಾಗಿದೆ. ಕಾಲೇಜಿನ ರಾಬರ್ಟ್ ಸಿಕ್ವೇರಾ ಹಾಲ್​​ನಲ್ಲಿ ರೆಮೋನಾ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ.

ಸತತ 127 ಗಂಟೆ ಭರತನಾಟ್ಯ ಪ್ರದರ್ಶನ ನೀಡಿದ್ದೇ ಈವರೆಗಿನ ದಾಖಲೆಯಾಗಿತ್ತು. ಇದೀಗ 170 ಗಂಟೆ ಸತತ ಪ್ರದರ್ಶನ ನೀಡುವ ಮೂಲಕ ರೆಮೋನಾ ಪಿರೇರಾ ವಿಶ್ವಮಟ್ಟದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ.

ಹೇಗೆ ಸಾಧ್ಯವಾಯ್ತು ರೆಮೋನಾ ಪಿರೇರಾ ಸಾಧನೆ?

ಕಳೆದ 13 ವರ್ಷಗಳಿಂದ ರೆಮೋನಾ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಈಗಾಗಲೇ ಭರತನಾಟ್ಯದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ವಿಶ್ವದಾಖಲೆಗಾಗಿ ಹಲವು ವರ್ಷಗಳಿಂದ ಸಿದ್ಧತೆ ಮಾಡಿದ್ದಾರೆ. ಪ್ರತಿದಿನ 5 ರಿಂದ 6ಗಂಟೆ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. ವಿದ್ಯೆಯ ಜೊತೆ ಭರತನಾಟ್ಯಕ್ಕೂ ಸಮಾನ ಪ್ರಾಶಸ್ತ್ಯ ನೀಡಿದ್ದಾರೆ.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಧಿಕಾರಿಗಳ ಸಮ್ಮುಖದಲ್ಲಿಯೇ ರೆಮೋನಾ ಭರತನಾಟ್ಯ ಪ್ರದರ್ಶಿಸಿದ್ದಾರೆ. ಏಳು ದಿನಗಳ‌ ಪ್ರದರ್ಶನ ಕ್ಯಾಮರಾದ ಮೂಲಕ ರೆಕಾರ್ಡ್ ಮಾಡಲಾಗಿದೆ. ಅಧಿಕಾರಿಗಳು ರೆಮೋನಾ ಸಾನೆಯನ್ನು ಸಂಪೂರ್ಣವಾಗಿ ದಾಖಲೀಕರಣ ಮಾಡಿಕೊಂಡಿದ್ದಾರೆ. ರೆಮೋನಾ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಶಿಕ್ಷಕರು, ಸಹಪಾಠಿಗಳಿಂದಲೂ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಇದೀಗ, ರೆಮೋನಾ ಸಾಧನೆಗೆ ಸಹಪಾಠಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಭರತನಾಟ್ಯ ಪ್ರದರ್ಶನ ಹೇಗಿತ್ತು ಆಹಾರ, ವಿಶ್ರಾಂತಿ?

ದಾಖಲೆ ಬರೆಯುವುದಕ್ಕಾಗಿ ಭರತನಾಟ್ಯ ಪ್ರದರ್ಶಿಸುತ್ತಿದ್ದ ಸಂದರ್ಭ ರೆಮೋನಾ ಮಿತ ಆಹಾರ ಸೇವಿಸುತ್ತಿದ್ದರು. ಪ್ರತಿ 3 ಗಂಟೆಗೊಮ್ಮೆ 15 ನಿಮಿಷದ ವಿಶ್ರಾಂತಿ ಇರುತ್ತಿತ್ತು. ಈ ವೇಳೆಯಲ್ಲಿ ಬಾಳೆಹಣ್ಣು, ಮೊಸರು, ಎಳನೀರು, ಚೆನ್ನಾಗಿ ಬೇಯಿಸಿದ ಬೆಳ್ತಿಗೆ ಅನ್ನ ಸೇವನೆ ಮಾಡಿದ್ದರು. ಇದಕ್ಕೆಂದೇ ಹಲವು ತಿಂಗಳುಗಳಿಂದ‌ ಆಹಾರ ಕ್ರಮವನ್ನು ಅಭ್ಯಾಸ ಮಾಡಿದ್ದರು.

ದಾಖಲೆಯ ವೇಳೆ ರೆಮೋನಾ ಪಿರೇರಾ ಆರೋಗ್ಯ ಸ್ಥಿತಿ ಹೇಗಿತ್ತು?

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆಗಾಗಿ ರೆಮೋನಾ ಪಿರೇರಾ ನಿರಂತರ ಭರತನಾಟ್ಯ ಮಾಡುತ್ತಿದ್ದಾಗ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆ್ಯಂಬುಲೆನ್ಸ್​ ಒಳಗೊಂಡ ತಂಡವೂ ಸ್ಥಳದಲ್ಲಿ ಹಾಜರಿತ್ತು. ಪ್ರತಿ ಬಾರಿ 3 ಗಂಟೆಗೊಮ್ಮೆ ವಿಶ್ರಾಂತಿ ಪಡೆಯುತ್ತಿದ್ದಾಗ ವೈದ್ಯರು ಆರೋಗ್ಯ ತಪಾಸಣೆ ಮಾಡುತ್ತಿದ್ದರು.  ಒಟ್ಟು ಏಳು ದಿನಗಳ ಅವಧಿಯಲ್ಲಿ ರೆಮೋನಾ ಪಿರೇರಾ ಭರತನಾಟ್ಯದ ವಿವಿಧ ಪ್ರಕಾರಗಳ ಪ್ರದರ್ಶನ ಮಾಡಿ ತೋರಿಸಿದ್ದಾರೆ. ಅದಕ್ಕೆ ತಕ್ಕಂತೆ ರೆಕಾರ್ಡೆಡ್ ಹಾಡುಗಳನ್ನು ಬಳಕೆ ಮಾಡಲಾಗಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *