LATEST NEWS
ಮಂಗಳೂರು – ಮುಳುಗುವ ಹಂತಕ್ಕೆ ತಲುಪಿದ್ದ ಹಡಗಿನಲ್ಲಿದ್ದ 15 ಮಂದಿ ಸಿರಿಯಾ ದೇಶದ ಪ್ರಜೆಗಳ ರಕ್ಷಣೆ
ಮಂಗಳೂರು ಜೂನ್ 21: ಅರಬ್ಬೀಸಮುದ್ರದಲ್ಲಿ ನೀರು ನುಗ್ಗಿ ಅಪಾಯ ಸ್ಥಿತಿಯಲ್ಲಿದ್ದ ಸಿರಿಯಾ ಹಡಗಿನಲ್ಲಿದ್ದ 15 ಮಂದಿ ನಾವೀಕರನ್ನು ಭಾರತೀಯ ಕರಾವಳಿಯ ರಕ್ಷಣಾ ಪಡೆ ರಕ್ಷಣೆ ಮಾಡಿದೆ.
ಎಂ.ವಿ.ಪ್ರಿನ್ಸಸ್ ಮಿರಾಲ್ ಎಂಬ ಹೆಸರಿನ ವಿದೇಶಿ ಹಡಗು ಸುಮಾರು 8 ಸಾವಿರ ಟನ್ ಉಕ್ಕಿನ ಕಾಯಿಲ್‌ಗಳನ್ನು ಚೀನಾದ ಟಿಯಾಂಜಿನ್‌ನಿಂದ ಲೆಬನಾನ್‌ಗೆ ಸಾಗಿಸುತ್ತಿತ್ತು. ಹಡಗಿನ ಒಳಭಾಗದಲ್ಲಿ ಉಂಟಾದ ಸಣ್ಣ ರಂಧ್ರದಿಂದ ನೀರು ಒಳ ನುಗ್ಗಿದ ಹಿನ್ನಲೆ ದುರಸ್ಥಿಗೆ ಮಂಗಳೂರು ಬಂದರು ಪ್ರವೇಶಕ್ಕೆ ಅವಕಾಶ ಕೋರಿದ್ದರು, ಆದರೆ ಅದಕ್ಕೂ ಮೊದಲೆ ಹಡಗು ಮುಳುಗುವ ಪರಿಸ್ಥಿತಿಗೆ ಬಂದ ಹಿನ್ನಲೆ ಹಡಗಿನ ಸಿಬ್ಬಂದಿಗಳು ರಕ್ಷಣೆಗೆ ಭಾರತೀಯ ಕರಾವಳಿ ರಕ್ಷಣಾ ಪಡೆಯನ್ನು ಕೇಳಿಕೊಂಡಿದ್ದರು.
ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಹಾಗೂ ಸಮುದ್ರದಲ್ಲಿ ಪ್ರತಿಕೂಲ ಹವಮಾನ ಇದ್ದರೂ ಲೆಕ್ಕಿಸದೇ ವಿಕ್ರಮ್ ಹಾಗೂ ಅಮರ್ಥ್ಯ ಹಡಗುಗಳಲ್ಲಿ ಸ್ಥಳಕ್ಕೆ ಧಾವಿಸಿ, ಸಮುದ್ರದಲ್ಲಿ ಸಿಲುಕಿದ್ದ ಸಿರಿಯಾ ಪ್ರಜೆಗಳನ್ನು ದಡಕ್ಕೆ ಕರೆತಂದರು.ಹಿಂದೂ ಮಹಾಸಾಗರ ಪ್ರದೇಶದ ವ್ಯಾಪ್ತಿಯಲ್ಲಿ ಪತ್ತೆ ಮತ್ತು ರಕ್ಷಣಾ ಕಾರ್ಯಾಚರಣೆಗೆ ನೋಡೆಲ್ ಏಜೆನ್ಸಿ ಆಗಿರುವ ಭಾರತೀಯ ಕರಾವಳಿ ರಕ್ಷಣಾ ಪಡೆಯ ರಕ್ಷಣಾ ಸಾಮರ್ಥ್ಯವನ್ನು ಈ ಯಶಸ್ವಿ ಕಾರ್ಯಾಚರಣೆಯು ಮತ್ತೆ ಸಾಬೀತು ಮಾಡಿದೆ. ‘ನಾವು ರಕ್ಷಿಸುತ್ತೇವೆ’ ಎಂಬ ಧ್ಯೇಯಕ್ಕೆ ಕರಾವಳಿ ರಕ್ಷಣಾ ಪಡೆಯು ಬದ್ಧವಾಗಿರುವುದನ್ನು ಎತ್ತಿ ತೋರಿಸಿದೆ ಎಂದು ಐಸಿಜಿ ಪ್ರಕಟಣೆಯಲ್ಲಿ ತಿಳಿಸಿದೆ.