LATEST NEWS
ಹತ್ರಾಸ್‌ನಲ್ಲಿ ಭೀಕರ ರಸ್ತೆ ಅಪಘಾತ 15 ಮಂದಿ ಬಲಿ, 16 ಜನ ಗಂಭೀರ..!
ಉತ್ತರಪ್ರದೇಶ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 15 ಜನ ಸಾವನ್ನಪ್ಪಿದ್ದರೆ, ಅನೇಕರು ಗಂಭೀರ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 93ರಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು ಬಸ್ ಹತ್ರಾಸ್‌ನಿಂದ ಆಗ್ರಾಕ್ಕೆ ತೆರಳುತ್ತಿದ್ದು, ಮಿನಿ ಟ್ರಕ್‌ನಲ್ಲಿದ್ದವರು ಸೇವಾಲ ಗ್ರಾಮಕ್ಕೆ ಹಿಂತಿರುಗುವಾಗ ಕನ್ವರ್‌ಪುರ ಗ್ರಾಮದ ಬಳಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಪಘಾತದ ಬಗ್ಗೆ ತಿಳಿದು ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪರಿಹಾರ ಕಾರ್ಯವನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ನಿಪುನ್ ಅಗರ್ವಾಲ್ ಅವರು, “ಆಗ್ರಾ-ಅಲಿಘರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಅನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸುವಾಗ ಬಸ್ ವ್ಯಾನ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ” ಎಂದು ಹೇಳಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮಾಹಿತಿಯ ಪ್ರಕಾರ, ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮಾಹಿತಿ ಪಡೆದ ಕೂಡಲೇ ಹತ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಆಸ್ಪತ್ರೆಗೆ ತಲುಪಿದರು. ಮೃತರನ್ನು ಮತ್ತು ಅಪಘಾತಕ್ಕೆ ಕಾರಣರಾದವರನ್ನು ಗುರುತಿಸುತ್ತಿದ್ದೇವೆ ಎಂದು ಹತ್ರಾಸ್ ಎಸ್ಪಿ ನಿಪುನ್ ಅಗರ್ವಾಲ್ ಹೇಳಿದ್ದಾರೆ. ಪ್ರಾಣ ಕಳೆದುಕೊಂಡವರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದು, ಈ ಘಟನೆಗೆ ಕಾರಣರಾದವರನ್ನು ಬಿಡುವುದಿಲ್ಲ. ಘಟನೆಯಲ್ಲಿ ಪ್ರಾಣ ಕಳೆದುಕೊಂಡವರಲ್ಲಿ ನಾಲ್ವರು ಮಕ್ಕಳೂ ಸೇರಿದ್ದಾರೆ ಎಂದಿದ್ದಾರೆ.