National
ಕೇರಳ ಇಡುಕ್ಕಿ ಭೂ ಕುಸಿತಕ್ಕೆ 13 ಬಲಿ..80ಕ್ಕೂ ಅಧಿಕ ಮಂದಿ ಮಣ್ಣಿನಡಿ ಸಿಲುಕಿರುವ ಸಾಧ್ಯತೆ

ತಿರುವನಂತಪುರಂ ಅಗಸ್ಟ್ 7: ಕೇರಳದಲ್ಲಿ ಮತ್ತೆ ಪ್ರಕೃತಿ ಮುನಿದಿದ್ದು, ಕೇರಳದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಇಲ್ಲಿನ ಇಡುಕ್ಕಿಯಲ್ಲಿ ಇಂದು ಬೆಳಗ್ಗೆ ಭೂಕುಸಿತವಾಗಿ 13 ಜನರು ಸಾವನ್ನಪ್ಪಿದ್ದಾರೆ.
ಕೇರಳದ ಪ್ರಸಿದ್ಧ ಪ್ರವಾಸಿತಾಣ ಮುನ್ನಾರ್ನಿಂದ 25 ಕಿ.ಮೀ ದೂರದಲ್ಲಿರೋ ರಾಜಮಲೈ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಲ್ಲಿ ಸುಮಾರು 70 ರಿಂದ 80 ಜನರು ವಾಸವಿದ್ದರು. ಮಣ್ಣಿನಡಿ ಎಷ್ಟು ಮಂದಿ ಸಿಲುಕಿದ್ದಾರೆ ಅನ್ನೋದು ಸದ್ಯಕ್ಕೆ ಸ್ಪಷ್ಟವಾಗಿ ಗೊತ್ತಾಗಿಲ್ಲ ಎಂದು ತಿಳಿಸಿದ್ದಾರೆ.
ಭೂಕುಸಿತಕ್ಕೆ ಕ್ವಾರ್ಟರ್ಸ್ ಮತ್ತು ಚರ್ಚ್ ಧರೆಗುರುಳಿ ಹಲವರು ಸಿಕ್ಕಿಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇದುವರೆಗೆ 13 ಮಂದಿಯ ಶವಗಳನ್ನು ಮಣ್ಣಿನಡಿಯಿಂದ ಹೊರತೆಗೆಯಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.
ಇದುವರೆಗೆ ಏಳು ಮಂದಿಯನ್ನು ಮಣ್ಣಿನಡಿಯಿಂದ ರಕ್ಷಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಕ್ಕಿಹಾಕಿಕೊಂಡವರಲ್ಲಿ ಬಹುತೇಕರು ಟೀ ಎಸ್ಟೇಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕರಾಗಿದ್ದಾರೆ.

ಇಂದು ನಸುಕಿನ ಜಾವ ಈ ದುರಂತ ಸಂಭವಿಸಿದ್ದರಿಂದ ನಿದ್ದೆಯಲ್ಲಿದ್ದ ಜನರಿಗೆ ಬೆಟ್ಟ ಕುಸಿದು ಬೀಳುವಾಗ ಎದ್ದು ಓಡಿಹೋಗಿ ತಪ್ಪಿಸಿಕೊಳ್ಳಲು ಸಮಯ ಇರಲಿಲ್ಲ. ಇದರಿಂದ ಸಾವು ನೋವು ಹೆಚ್ಚಾಗಿದೆ. ಭಾರೀ ಮಳೆಗೆ ಪ್ರವಾಹ ಉಂಟಾಗಿ ಪೆರಿಯವರ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ರಕ್ಷಣಾ ಪಡೆಗಳಿಗೆ ದುರ್ಘಟನೆ ನಡೆದ ಸ್ಥಳಕ್ಕೆ ಬೇಗನೆ ತಲುಪಲು ಸಾಧ್ಯವಾಗಿಲ್ಲ. ಸದ್ಯ ಸ್ಥಳದಲ್ಲಿ ಅಗ್ನಿಶಾಮಕ ಮತ್ತು ರಕ್ಷಣಾ ಪಡೆ ಸಿಬ್ಬಂದಿ, ಎನ್ ಡಿಆರ್ ಎಫ್, ಕಂದಾಯ ಇಲಾಖೆ ಅಧಿಕಾರಿಗಳು, ಎಸ್ಟೇಟ್ ಕಾರ್ಮಿಕರು ಮತ್ತು ಪೊಲೀಸರು ಅವಶೇಷಗಳಡಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಜಿಲ್ಲಾಧಿಕಾರಿ ಹೆಚ್ ದಿನೇಶನ್ ಮಾತನಾಡಿ, ರಕ್ಷಣಾ ಸಿಬ್ಬಂದಿಯನ್ನು ಪೆಟ್ಟುಮುಡಿಗೆ ಕಳುಹಿಸಲಾಗಿದ್ದು ಅಲ್ಲಿ ಜನರನ್ನು ಹುಡುಕುವ ಮತ್ತು ರಕ್ಷಿಸುವ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ.
ಮುನ್ನಾರ್ ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್, ಇಡುಕ್ಕಿಯ ಮುನ್ನಾರ್ ಹತ್ತಿರ ರಾಜಮಾಲಾದಲ್ಲಿ ಉಂಟಾಗಿರುವ ಭೂಕುಸಿತದಲ್ಲಿ ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡವರ ರಕ್ಷಣಾ ಕಾರ್ಯ ಸಾಗುತ್ತಿದೆ. ಪರಿಹಾರ ಕಾರ್ಯಕ್ಕೆ ಹೆಲಿಕಾಪ್ಟರ್ ಸೇವೆ ಪಡೆಯಲು ಭಾರತೀಯ ವಾಯುಪಡೆಯನ್ನು ಸಂಪರ್ಕಿಸಲಾಗಿದೆ. ಅದು ಸದ್ಯದಲ್ಲಿಯೇ ಬರುವ ನಿರೀಕ್ಷೆಯಿದೆ ಎಂದಿದ್ದಾರೆ.