LATEST NEWS
12 ವರ್ಷ ಬಾಲಕ ಹಕೀಫ್ ಕೊಲೆ ಪ್ರಕರಣ – ಪಬ್ ಜೀ ಜತೆಗಾರ ಬಾಲಕನ ವಶಕ್ಕೆ ಪಡೆದ ಪೊಲೀಸರು..!!
ಮಂಗಳೂರು ಎಪ್ರಿಲ್ 4: ಪಬ್ ಜೀ ಆಟದ ಸಂದರ್ಭದಲ್ಲಿ ಉಂಟಾದ ಗಲಾಟೆಯಲ್ಲಿ ಕೊಲೆಯಾದ ಹಕೀಫ್ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಉಳ್ಳಾಲದ ಕೆ.ಸಿ. ರೋಡ್ ನ ಮೈದಾನವೊಂದರ ಮೂಲೆಯಲ್ಲಿ 12 ವರ್ಷದ ಹಕೀಫ್ ನ ಶವಪತ್ತೆಯಾಗಿತ್ತು. ಪಬ್ಜಿ ಆಟವಾಡಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೊರ ಹೋಗಿದ್ದ ಹಕೀಫ್ ತಡರಾತ್ರಿಯಾದರೂ ಪುತ್ರ ಬಾರದ ಕಾರಣ ಪೋಷಕರು ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಕೂಡಲೇ ಪೊಲೀಸ್ ತಂಡ ರಾತ್ರಿಯಿಡೀ ಶೋಧ ಕಾರ್ಯ ಆರಂಭಿಸಿ ನಾನಾ ಕಡೆ ಹುಡುಕಾಟ ನಡೆಸಿದರೂ ಹಕೀಫ್ ಪತ್ತೆಯಾಗಿರಲಿಲ್ಲ.
ಭಾನುವಾರ ಬೆಳಗ್ಗಿನ ವೇಳೆ ಕೆ.ಸಿ. ರೋಡ್ ಮೈದಾನದ ಒಂದು ಮೂಲೆಯಲ್ಲಿ ಬಾಲಕನ ದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಲೆಯ ಮೇಲೆ ಕಲ್ಲಿನಿಂದ ಜಜ್ಜಿದ ಗಾಯವಿದೆ. ಮೃತದೇಹವನ್ನು ತರಗೆಲೆಯಿಂದ ಮುಚ್ಚಿ ಬಚ್ಚಿಡಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಥಳೀಯರು ಹಾಗೂ ಬಾಲಕ ಸಹಪಾಠಿಗಳಿಂದ ಮಾಹಿತಿ ಕಲೆ ಹಾಕಿದ್ದು, ಈ ಸಂದರ್ಭ ಹಕೀಫ್ ಜೊತೆ ಪಬ್ ಜಿ ಆಟವಾಡುತ್ತಿದ್ದ ದೀಪಕ್ ಎಂಬ ಬಾಲಕನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಹಕೀಬ್ ಯಾವತ್ತೂ ಪಬ್ ಜೀ ಆಟದಲ್ಲಿ ಗೆಲ್ಲುತ್ತಿದ್ದ. ಆನ್ ಲೈನ್ ಮೂಲಕ ಅನೇಕರನ್ನು ಸೋಲಿಸುತ್ತಲೇ ಇದ್ದ. ಇದರಿಂದ ಮೊಬೈಲ್ ಅಂಗಡಿಯಲ್ಲಿ ಪರಿಚಯಗೊಂಡಿದ್ದ ನೆರೆಮನೆಯ ನಿವಾಸಿ ದೀಪಕ್ ಜತೆಗೂ ಆಟಕ್ಕೆ ಮುಂದಾಗಿದ್ದ.
ಆನ್ ಲೈನ್ ಮೂಲಕ ಆಟವಾಡಿದ ಸಂದರ್ಭ ಹಕೀಬ್ ಗೆಲುವು ಸಾಧಿಸಿದಾಗ ಸಂಶಯ ವ್ಯಕ್ತಪಡಿಸಿದ ದೀಪಕ್ , ನಿನ್ನ ಆಟ ಬೇರೆ ಯಾರೋ ಆಡುತ್ತಿದ್ದಾರೆ. ಅದಕ್ಕೆ ಎದುರುಬದುರಾಗಿ ಕುಳಿತು ಆಡುವ ಛಾಲೆಂಜ್ ಕಟ್ಟಿದ್ದ . ಅದರಂತೆ ಶನಿವಾರ ಸಂಜೆ ಬಳಿಕ ಇಬ್ಬರೂ ಜೊತೆಯಾಗಿ ಆಟವಾಡಲು ಆರಂಭಿಸಿದ್ದರು. ಆದರೆ ಆಟದಲ್ಲಿ ಹಾಕೀಬ್ ಸೋಲನು ಕಂಡಿದ್ದಾನೆ.
ಇದರಿಂದ ದೀಪಕ್- ಹಾಕೀಬ್ ನಡುವೆ ವಾಗ್ವಾದ ನಡೆದಿತ್ತು. ಇದರಿಂದ ಕುಪಿತಗೊಂಡ ಹಾಕೀಬ್ ಸಣ್ಣ ಕಲ್ಲೆಸೆದು ದೀಪಕ್ ಗೆ ಮೊದಲಿಗೆ ಹಲ್ಲೆ ನಡೆಸಿದ್ದನು. ಇದರಿಂದ ರೊಚ್ಚಿಗೆದ್ದ ದೀಪಕ್ ದೊಡ್ಡ ಕಲ್ಲನ್ನೇ ಎತ್ತಿ ಹಾಕೀಬ್ ಮೇಲೆ ಹಲ್ಲೆ ನಡೆಸಿದಾಗ ವಿಪರೀತ ರಕ್ತಸ್ರಾವ ಉಂಟಾದ ಹಾಕೀಬ್ ಸ್ಥಳದಲ್ಲೇ ಕುಸಿದುಬಿದ್ದಿದ್ದ. ಗಾಬರಿಗೊಂಡ ದೀಪಕ್ ಆತನನ್ನು ಸಮೀಪದಲ್ಲೇ ಇದ್ದ ಕಂಪೌಂಡ್ ಪಕ್ಕಕ್ಕೆ ಕರೆದೊಯ್ದು ಬಾಳೆ ಎಲೆ, ತೆಂಗಿನಗರಿಗಳನ್ನು ಮುಚ್ಚಿ ಪರಾರಿಯಾಗಿದ್ದನು. ಇಂದು ಬೆಳಿಗ್ಗೆ ಸ್ಥಳೀಯರು ಹಾಕೀಬ್ ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ದೀಪಕ್ ನನ್ನು ವಶಕ್ಕೆ ಪಡೆದುಕೊಂಡಿರುವ ಉಳ್ಳಾಲ ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ಕೃತ್ಯದ ವೇಳೆ ದೀಪಕ್ ಓರ್ವನೇ ಇದ್ದನೇ ಅಥವಾ ಇನ್ಯಾರೋ ಇದ್ದರು ಅನ್ನುವ ಕುರಿತು ಸ್ಥಳೀಯ ಸಿಸಿಟಿವಿ ದಾಖಲೆಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಸ್ಥಳಕ್ಕೆ ಪೊಲೀಸ್ ಕಮೀಷನರ್ ಶಶಿಕುಮಾರ್ ಭೇಟಿ ನೀಡಿದರು. ಈ ವೇಳೆ ಘಟನೆ ಕುರಿತು ಮಾಹಿತಿ ನೀಡಿದ ಕಮೀಷನರ್ ಮಕ್ಕಳು ಮೊಬೈಲ್ ಆಟದ ವಿಚಾರಕ್ಕೆ ಸಂಬಂಧಿಸಿ ಕೊಲೆಗೀಡಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.