DAKSHINA KANNADA
ಫೆ. 25ರಿಂದ ಮೂರು ದಿನ ಉಳ್ಳಾಲದಲ್ಲಿ DYFI 12ನೇ ಕರ್ನಾಟಕ ರಾಜ್ಯ ಸಮ್ಮೇಳನ
ಮಂಗಳೂರು : ಡಿವೈಎಫ್ಐ 12ನೇ ಕರ್ನಾಟಕ ರಾಜ್ಯ ಸಮ್ಮೇಳನವು ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿ ಎಂಬ ಘೋಷಣೆಯೊಂದಿಗೆ ಫೆಬ್ರವರಿ 25, 26, 27-2024 ರಂದು ಉಳ್ಳಾಲದ ಕಲ್ಲಾಪು ಬಳಿ ಇರುವ ಯುನಿಟಿ ಸಭಾಂಗಣದಲ್ಲಿ ನಡೆಯಲಿದೆ. ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮುಖಂಡರು ಮಾಹಿತಿ ನೀಡಿದರು.
ಭಾರತದ ಸ್ವಾತಂತ್ರ್ಯ ಹೋರಾಟದ ಹುತಾತ್ಮ ವೀರರಾದ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಅಶ್ಪಾಕುಲ್ಲಾ ಖಾನ್ , ಮೊದಲಾದ ಕ್ರಾಂತಿಕಾರಿಗಳ ಆಶಯದೊಂದಿಗೆ ಪಂಜಾಬಿನ ಲೂಧಿಯಾನದಲ್ಲಿ 1980 ರಲ್ಲಿ ಸ್ಥಾಪನೆಯಾಗಿ ಕಳೆದ 44 ವರ್ಷಗಳಿಂದ “ಸರ್ವರಿಗೂ ಶಿಕ್ಷಣ ಸರ್ವರಿಗೂ ಉದ್ಯೋಗ” ಎಂಬ ಘೋಷಣೆ ಅಡಿಯಲ್ಲಿ ಮಾನವ ಪ್ರೇಮಿ ಸಂಘಟನೆಯಾಗಿ ಅಲ್ಪಸಂಖ್ಯಾತ, ದಲಿತ, ಆದಿವಾಸಿ ಸಮುದಾಯಗಳು ಸೇರಿದಂತೆ ದಮನಿತರ ಪರವಾಗಿ ಅಧಿಕಾರಶಾಹಿಗಳ ಎದುರಾಗಿ ಅಗಣಿತ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಕೋಮುವಾದಕ್ಕೆ ಎದುರಾಗಿ ಸೌಹಾರ್ದತೆ, ಜಾತ್ಯಾತೀತ ಮೌಲ್ಯಗಳ ರಕ್ಷಣೆಗಾಗಿ ರಾಜಿ ರಹಿತ ಹೋರಾಟಗಳನ್ನು ನಡೆಸುತ್ತಾ ಬಂದಿದ್ದು ಬಳ್ಳಾರಿ ಉಕ್ಕಿನ ಕೈಗಾರಿಕೆಯ ಸ್ಥಾಪನೆಗಾಗಿ “ವಿಜಯನಗರದ ಉಕ್ಕು ಕರ್ನಾಟಕದ ಹಕ್ಕು” ಎಂಬ ಘೋಷಣೆಯೊಂದಿಗೆ ಉದ್ಯೋಗದ ಹಕ್ಕಿಗಾಗಿ ನಡೆದ ಐತಿಹಾಸಿಕ ಹೋರಾಟ, ಗ್ರಾಮೀಣ ಕೃಪಾಕ ನೌಕರರ ಹೋರಾಟ, ಸಾಕ್ಷರತಾ ಪ್ರೇರಕರ ಚಳುವಳಿ, ಬಾಬಾ ಬುಡನ್ ಗಿರಿಯ ಸೌಹಾರ್ದ ಪರಂಪರೆಯ ರಕ್ಷಣೆಗಾಗಿ ನಡೆದ ಚಳುವಳಿ ಮೊದಲಾದವುಗಳು ಕರ್ನಾಟಕ ರಾಜ್ಯದಾದ್ಯಂತ ನಡೆದ ಹೋರಾಟಗಳಾದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿವೈಎಪ್ಐ ತನ್ನ ಆರಂಭದ ಕಾಲದಿಂದಲೂ ಕಾರ್ಯಾಚಾರಿಸುತ್ತಿದ್ದು ಶಿಕ್ಷಣ, ಆರೋಗ್ಯದ ವ್ಯಾಪಾರಿಕರಣದ ಎದುರಾಗಿ, ಉದ್ಯೋಗ ಮತ್ತು ಆರೋಗ್ಯದ ಹಕ್ಕುಗಳಿಗಾಗಿ, ಕುಡಿಯುವ ನೀರಿನ ಖಾಸಗಿಕರಣದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಬೃಹತ್ ಕೈಗಾರಿಕೆಗಳು ಇಲ್ಲಿನ ನೆಲ, ಜಲ ಪರಿಸರವನ್ನು ಮಾಲಿನ್ಯಗೊಳಿಸುವುದರ ವಿರುದ್ಧ , ಸುರತ್ಕಲ್ ಅಕ್ರಮ ಟೋಲ್ ಗೇಟ್ ನ ತೆರವಿಗಾಗಿ ಹೀಗೆ ಅನೇಕ ಹೋರಾಟಗಳನ್ನು ನಡೆಸಿದೆ. ಇಂತಹ ಪ್ರಜಾಪ್ರಭುತ್ವ ಪ್ರೇಮಿ ಸಂಘಟನೆಯದ ಡಿವೈಎಫ್ಐನ ಕರ್ನಾಟಕ ರಾಜ್ಯ ಸಮ್ಮೇಳನವು ಮೂರು ವರ್ಷಗಳಿಗೊಮ್ಮೆ ನಡೆಯಲಿದ್ದು ಈ ಬಾರಿ ಡಿವೈಎಫ್ಐ ಕರ್ನಾಟಕ ರಾಜ್ಯದ 12ನೇ ಸಮ್ಮೇಳನವು ಮಂಗಳೂರಿನಲ್ಲಿ ನಡೆಯಲಿದೆ. ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನ ಮೊದಲ ಎರಡು ದಿನ ಪ್ರತಿನಿಧಿ ಅಧಿವೇಶನ ನಡೆಯಲಿದ್ದು ರಾಜ್ಯದ ಪ್ರತಿ ಜಿಲ್ಲೆಗಳಿಂದಲೂ ಸದಸ್ಯತ್ವದ ಆಧಾರದ ಮೇಲೆ ಮುನ್ನೂರು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಸಮ್ಮೇಳನದ ಉದ್ಘಾಟನೆ ರಾಜ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭವು ತಾರೀಕು 25/2/2024 ರಂದು ಬೆಳಿಗ್ಗೆ 10ಕ್ಕೆ ಯುನಿಟಿ ಹಾಲ್ ನ ಪ್ರೊಫೆಸರ್ ಅಮೃತ ಸೋಮೇಶ್ವರ ವೇದಿಕೆ, ಡಾ. ವಿಠಲ್ ಭಂಡಾರಿ ಸಭಾಂಗಣದಲ್ಲಿ ಕಾಂ. ನಾಗೇಶ್ ಕುಮಾರ್ ನಗರದಲ್ಲಿ ನಡೆಯಲಿದ್ದು ಕರ್ನಾಟಕದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೋಹನ್ ದಾಸ್ ರವರು ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಡಿವೈಎಫ್ಐ ಅಖಿಲ ಭಾರತ ಅಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಕಾಂ.ಎಎ ರಹೀಮ್ ರವರು ಭಾಗವಹಿಸಲಿದ್ದಾರೆ. 12ನೇ ಕರ್ನಾಟಕ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿರುವ ವಿಶ್ರಾಂತ ಜಿಲ್ಲಾಧಿಕಾರಿಗಳು ಆಗಿರುವ ಎ.ಬಿ ಇಬ್ರಾಹಿಂ ಐಎಎಸ್ ಸ್ವಾಗತ ಭಾಷಣ ಮಾಡಲಿದ್ದು ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಡಿವೈಎಫ್ಐ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ ವಹಿಸಲಿದ್ದು, ಕಾರ್ಯದರ್ಶಿ ಬಸವರಾಜ್ ಪೂಜಾರ್, ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ರಾಜೇಶ್ ವೆಲ್ಲಾಟ್, ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ರೇಣುಕಾ ಕಹರ್ ಭಾಗವಹಿಸಲಿದ್ದಾರೆ.
ಯೂಥ್ ಮಾರ್ಚ್
ಡಿವೈಎಫ್ಐ ಹನ್ನೆರಡನೇ ರಾಜ್ಯ ಸಮ್ಮೇಳನದ ಸಮಾರೋಪವು 27.02.2024 ರಂದು ನಡೆಯಲಿದ್ದು ಆ ದಿನ ಸಂಜೆ 3 ಗಂಟೆಗೆ ಕುತ್ತಾರ್ ಜಂಕ್ಷನ್ ನಿಂದ ಕಲ್ಲಾಪು ಯುನಿಟಿ ಹಾಲ್ ಮೈದಾನದ ವರೆಗೆ ಯುವಜನರ ವರ್ಣರಂಜಿತ ಮೆರವಣಿಗೆ ನಡೆಯಲಿದ್ದು ಯೂತ್ ಮಾರ್ಚ್ಗೆ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸುವ ನಿರೀಕ್ಷೆ ಇದೆ. ಸೌಹಾರ್ದತೆಯನ್ನು ಸಾರುವ ಟ್ಯಾಬ್ಲೋಗಳು. ಡಾ. ಅಂಬೇಡ್ಕರ್, ಮಹಾತ್ಮ ಗಾಂಧಿ, ಭಗತ್ ಸಿಂಗ್, ನಾರಾಯಣ ಗುರು, ಕೋಟಿ-ಚೆನ್ನಯ, ಕುದ್ಮಲ್ ರಂಗರಾವ್, ವಸಾಹತು ಆಕ್ರಮಣದ ವಿರುದ್ಧ ಸೈನ್ಯ ಕಟ್ಟಿ ಹೋರಾಡಿದ ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ, ಅಮರ ಸುಳ್ಳ ವೀರರ ಭಾವಚಿತ್ರಗಳ ಮೆರವಣಿಗೆ, ಚೆಂಡೆ, ಬ್ಯಾಂಡ್ ಸೆಟ್, ವೇಷಭೂಷಣಗಳ ಜೊತೆಗೆ ಯುವಜನರ ಆಕರ್ಷಕ ಪಥ ಸಂಚಲನ ನಡೆಯಲಿದೆ.
ಸಮ್ಮೇಳನದ ಬಹಿರಂಗ ಸಭೆ
12ನೇ ಕರ್ನಾಟಕ ರಾಜ್ಯ ಸಮ್ಮೇಳನದ ಬಹಿರಂಗ ಸಭೆಯು ತೊಕ್ಕೊಟ್ಟು ಯುನಿಟಿ ಮೈದಾನದ ಭಾಸ್ಕರ ಕುಂಬಳೆ ವೇದಿಕೆ, ಶ್ರೀನಿವಾಸ್ ಬಜಾಲ್ ನಗರದಲ್ಲಿ ನಡೆಯಲಿದ್ದು ಇದರ ಪ್ರಧಾನ ಭಾಷಣಕಾರರಾಗಿ ಸಿಪಿಐಎಂ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಕಾಂ. ಸೀತಾರಾಮ್ ಯೆಚೂರಿ, ಬಹು ಭಾಷಾ ಚಲನಚಿತ್ರ ನಟ ಪ್ರಕಾಶ್ ರೈ, ರಾಜ್ಯಸಭಾ ಸದಸ್ಯರು ಹಾಗೂ ಡಿವೈಎಫ್ಐ ನ ಅಖಿಲ ಭಾರತ ಅಧ್ಯಕ್ಷರಾಗಿರುವ ಎಎ ರಹೀಂ ರವರುಗಳು ಪ್ರಧಾನ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
ಸಮ್ಮೇಳನದ ಮೂರು ದಿನವು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ನಾದ ಮಣಿನಾಲ್ಕೂರುರವರ ಏಕತಾರಿ ಹಾಡುಗಳ ಗಾಯನ, ಪಿವೈಎಂ ಟ್ರೂಪ್ಸ್ ಬಜಾಲ್ ಮತ್ತು ಸೌಹಾರ್ದ ಕಲಾವಿದರು ಕುತ್ತಾರು ಇವರಿಂದ ಸಾಂಸ್ಕೃತಿಕ ಉತ್ಸವ, ಡಾಕ್ಟರ್ ಅಮೃತ ಸೋಮೇಶ್ವರ ಅವರ ನೆನಪಿನಲ್ಲಿ ಅಮೃತ ಸ್ಮರಣೆ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ, ಫೆಬ್ರವರಿ 26 ರಂದು ಬೆಳಗ್ಗೆ 10:30 ಕ್ಕೆ ದೆಹಲಿ ಜೆಎನ್ ಯು ವಿವಿ ಯ ವಿಶ್ರಾಂತ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆಯವರಿಂದ “ಕರಾವಳಿ ಕಟ್ಟಿದ ಬಗೆ” ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನಡೆಯಲಿದೆ ಎಂದು ಈ ಮೂಲಕ ತಿಳಿಸುತ್ತಿದ್ದೇವೆ.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಕಾರ್ಯಾಧ್ಯಕ್ಷ ಡಾ| ಕೃಷ್ಣಪ್ಪ ಕೊಂಚಾಡಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಬಜಾಲ್ , ಸಂಘಟನಾ ಕಾರ್ಯದರ್ಶಿ
ಸುನಿಲ್ ಕುಮಾರ್ ಬಜಾಲ್ , ಖಜಾಂಚಿ ಬಿ.ಕೆ ಇಮ್ತಿಯಾಜ್ , ನವೀನ್ ಕೊಂಚಾಡಿ, ಮನೋಜ್ ವಾಮಂಜೂರು, ರಿಜ್ವಾನ್ ಹರೇಕಳ ಮತ್ತಿತರರು ಉಪಸ್ಥಿತರಿದ್ದರು.