DAKSHINA KANNADA
ಗೃಹ ಖಾತೆಗೆ ರೈ ನಾಲಾಯಕ್ : ವಿಜಯಕುಮಾರ್ ಶೆಟ್ಟಿ

ಮಂಗಳೂರು, ಆಗಸ್ಟ್ 30 :ಅರಣ್ಯ,ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರಿಗೆ ಗೃಹ ಖಾತೆ ನೀಡುವುದಕ್ಕೆ ಕಾಂಗ್ರೆಸ್ ಪಕ್ಷದಲ್ಲೇ ಅಸಮಾಧಾನ ಭುಗಿಲೆದ್ದಿದೆ. ಕಾಂಗ್ರೆಸ್ಸಿನ ಕೆಲ ನಾಯಕರು ಒಂದು ಕಡೆ ರಮಾನಾಥ ರೈ ಅವರಿಗೆ ಗೃಹಖಾತೆ ಅನುಗ್ರಹಿಸಲು ಕಟೀಲು ದೇವಸ್ಥಾನದಲ್ಲಿ ದೇವರ ಮೊರೆ ಹೋದರೆ, ಮತ್ತೊಂದು ಕಡೆ ಕಾಂಗ್ರೆಸ್ ನ ಕೆಲ ನಾಯಕರು ರಮಾನಾಥ ರೈ ಅವರ ವಿರುದ್ದ ತಿರುಗಿ ಬಿದ್ದಿದ್ದಾರೆ.ಹೋಂ ಮಿನಿಸ್ಟರಿಗೆ ರೈ ನಾಲಯಕ್ ಎಂದಿದ್ದಾರೆ ವಿಜಯಕುಮಾರ್ ಶೆಟ್ಟಿ. ರಮಾನಾಥ ರೈ ಅವರು ಗೃಹ ಸಚಿವರಾಗಲು ಅರ್ಹ ವ್ಯಕ್ತಿ ಅಲ್ಲ ಎಂದಿದ್ದಾರೆ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ವಿಜಯಕುಮಾರ್ ಶೆಟ್ಟಿ. ಈ ಬಗ್ಗೆ ಹೇಳಿಕೆ ನೀಡಿರುವ ಅವರು ವೀರಪ್ಪ ಮೊಯಿಲಿ ಅವರ ಸಂಪುಟದಲ್ಲಿ ಸಹಾಯಕ ಗೃಹ ಖಾತೆಯನ್ನು ಹೊಂದಿದ್ದ ರಮಾನಾಥ ರೈ ಅವರು ಜಿಲ್ಲೆಯಲ್ಲಿ ಅನೇಕ ಕಡೆ ರೌಡಿಸಂ,ಗೂಂಡಾಗಿರಿ ಮಾಡಿದ್ದಾರೆ.ಅವರ ಬಗ್ಗೆ ವಿಟ್ಲ ಪೋಲಿಸ್ ಠಾಣೆಯಲ್ಲಿ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದಾವೆ. ಇಂತಹವರಿಗೆ ಮತ್ತೆ ಗೃಹ ಖಾತೆ ಜವಾಬ್ದಾರಿ ನೀಡಿದರೆ ಹೇಗೆ ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ಸಿನ ನೈತಿಕತೆ ಎಲ್ಲಿ ಉಳಿಯಿತು ಎಂದಿದ್ದಾರೆ . ರಮಾನಾಥ ರೈ ಅವರು ಶುದ್ದ ಕಾಂಗ್ರೆಸಿಗರು ಅಲ್ಲ, ಈ ಹಿಂದೆ ಜನಸಂಘ, ಜೆಡಿಎಸ್ ನಲ್ಲಿದ್ದು ಮತ್ತೆ ಕಾಂಗ್ರೆಸಿಗೆ ವಲಸೆ ಬಂದವರು. ಇಂಥವರಿಗೆ ಗೃಹಖಾತೆ ನೀಡಿದರೆ ಕಾಂಗ್ರೆಸ್ ನ ಭಾಗ್ಯವೋ ಅಥವಾ ಜಿಲ್ಲೆಯ ಜನರ ದೌರ್ಭಾಗ್ಯವೋ ಎಂದು ಕಿಡಿಕಾರಿದರು.