UDUPI
ಹೆಚ್.ಐ.ವಿ. ಬಗ್ಗೆ ಸಾಮಾಜಿಕ ಅರಿವು ಮೂಡಿಸಿ : ಡಾ. ವೈ.ಎಸ್.ರಾವ್
ಹೆಚ್.ಐ.ವಿ. ಬಗ್ಗೆ ಸಾಮಾಜಿಕ ಅರಿವು ಮೂಡಿಸಿ : ಡಾ. ವೈ.ಎಸ್.ರಾವ್
ಉಡುಪಿ, ಡಿಸೆಂಬರ್ 02 : ಹೆಚ್.ಐ.ವಿ ಹರಡುವ ಬಗ್ಗೆ ಹಾಗೂ ಅದರ ಪರಿಣಾಮಗಳ ಬಗ್ಗೆ ನರ್ಸಿಂಗ್ ವಿದ್ಯಾರ್ಥಿಗಳು ಸಮಾಜದಲ್ಲಿ ಅರಿವು ಮೂಡಿಸಬೇಕು ಎಂದು ಐ.ಎಂ.ಎ ಅಧ್ಯಕ್ಷ ಡಾ. ವೈ.ಎಸ್.ರಾವ್ ತಿಳಿಸಿದ್ದಾರೆ.
ಉಡುಪಿಯ ರೆಡ್ ಕ್ರಾಸ್ ಭವನದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಧನ್ವಂತರಿ ಕಾಲೇಜ್ ಆಫ್ ನರ್ಸಿಂಗ್ ಮತ್ತು ವಿದ್ಯಾರತ್ನ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕ್ವಿಜ್ ಸ್ಪರ್ಧೆ ಮತ್ತು ಏಡ್ಸ್ ಬಗ್ಗೆ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆಚ್.ಐ.ವಿ ಹರಡುವ ಬಗ್ಗೆ ಮತ್ತು ಏಡ್ಸ್ ಬಗ್ಗೆ ಅರಿವಿಲ್ಲದೇ ಇದುವರೆಗೆ ಈ ರೋಗಕ್ಕೆ ಅನೇಕ ಮಂದಿ ಬಲಿಯಾಗಿದ್ದಾರೆ.
ಅಸುರಕ್ಷಿತ ಲೈಂಗಿಕ ಸಂಪರ್ಕ, ತಾಯಿಯಿಂದ ಗರ್ಭದಲ್ಲಿರುವ ಮಗುವಿಗೆ, ಏಡ್ಸ್ ರೋಗಿಯ ರಕ್ತ ಪಡೆಯುವುದರಿಂದ ಈ ರೋಗ ಹರಡಲಿದ್ದು, ಏಡ್ಸ್ ರೋಗಿಯನ್ನು ಮುಟ್ಟುವುದರಿಂದ , ಚಿಕಿತ್ಸೆ ನೀಡುವುದರಿಂದ ರೋಗ ಹರಡುವುದಿಲ್ಲ.
ನರ್ಸಿಂಗ್ ವಿದ್ಯಾರ್ಥಿಗಳು , ಏಡ್ಸ್ ರೋಗ ಹರಡುವ ಬಗ್ಗೆ, ರೋಗ ಬಾರದಂತೆ ತಡೆಯುವ ಬಗ್ಗೆ ಹಾಗೂ ರೋಗಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಅರಿವು ಹೊಂದಿರಬೇಕು ಎಂದು ಹೇಳಿದರು.
ಏಡ್ಸ್ ರೋಗಕ್ಕೆ ಯಾವುದೇ ಔಷಧ ಇದುವರೆವಿಗೂ ಇಲ್ಲವಾಗಿದ್ದು, ಅಗತ್ಯ ಪೌಷ್ಠಿಕ ಆಹಾರ ಸೇವನೆಯಿಂದ ಏಡ್ಸ್ ರೋಗಿಗಳೂ ಸಹ, ಸಾಮಾನ್ಯರಂತೆ ಜೀವನ ನಡೆಸಲು ಸಾಧ್ಯವಿದೆ.
ರೋಗಿಗಳಲ್ಲಿ ಆತ್ಮ ವಿಶ್ವಾಸ ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದು ಡಾ. ರಾವ್ ಹೇಳಿದರು.
ಉಡುಪಿ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ. ಉಮೇಶ್ ಪ್ರಭು ಅಧ್ಯಕ್ಷತೆ ವಹಿಸಿದ್ದರು.
ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ ಡಾ. ರಾಮಚಂದ್ರ ಕಾಮತ್, ನರ್ಸಿಂಗ್ ವಿದ್ಯಾಥಿಗಳಿಗೆ ಕ್ವಿಜ್ ಕಾರ್ಯಕ್ರಮ ನಡೆಸಿದರು.
ಉಡುಪಿ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಡಾ. ಅಶೋಕ್ ಕುಮಾರ್,ಜೂನಿಯರ್ ರೆಡ್ ಕ್ರಾಸ್ ಕಮಿಟಿಯ ಜಯರಾಮ ಆಚಾರ್ಯ ಸಾಲಿಗ್ರಾಮ ಉಪಸ್ಥಿತರಿದ್ದರು.