DAKSHINA KANNADA
ಹಿಂದೂ ಧರ್ಮಕ್ಕೆ ಮರಳಿದ ಕ್ರೈಸ್ತ ಕುಟಂಬ.
ಮಂಗಳೂರು,ಜುಲೈ24: 40 ವರ್ಷಗಳ ಹಿಂದೆ ಹಿಂದೂ ಧರ್ಮದಿಂದ ಕ್ರಿಶ್ಟಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಕುಟುಂಬವೊಂದು ಇದೀಗ ಮಾತೃಧರ್ಮಕ್ಕೆ ಮರಳಿದೆ. ಮಂಗಳೂರಿನ ಪದವಿನಂಗಡಿಯ ಅರುಣ್ ಮೊಂತೆಯೋ ಅವರ ಕುಟುಂಬ ಹಿಂದೂ ಧರ್ಮಕ್ಕೆ ಮರಳಿದ್ದು, ಧಾರ್ಮಿಕ ವಿಧಿವಿಧಾನಗಳನ್ನು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಗಳು ನೆರವೇರಿಸಿದರು.
ಮೂಲತ ಹಿಂದೂ ಕುಟುಂಬವೇ ಆಗಿದ್ದ ಅರುಣ್ ಮೊಂತೆಯೋ ಅವರ ತಾಯಿ 40 ವರ್ಷಗಳ ಹಿಂದೆ ಅನಿವಾರ್ಯ ಕಾರಣಗಳಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಮತಾಂತರಗೊಂಡ ಬಳಿಕ ಅರುಣ್ ಅವರ ಕುಟುಂಬ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಈ ಹಿನ್ನಲೆಯಲ್ಲಿ ಅರುಣ್ ಮೂರು ತಿಂಗಳ ಹಿಂದೆ ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಗಳನ್ನು ಭೇಟಿ ಮಾಡಿ ಹಿಂದೂ ಧರ್ಮಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದರು.
ಈ ಹಿನ್ನಲೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಗುರುಪುರು ವಜ್ರದೇಹಿ ಮಠದ ಸ್ವಾಮೀಜಿಗಳನ್ನು ಸಂಪರ್ಕಿಸಿ ಅವರ ಸಲಹೆ ಹಾಗೂ ಸಹಕಾರವನ್ನು ಕೋರಿದ್ದರು. ಇಂದು ಮಠದಲ್ಲಿ ನಡೆದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅರುಣ್ ಹಾಗೂ ಅವರ ಪತ್ನಿ, ತಾಯಿ ಹಾಗೂ ಇಬ್ಬರು ಮಕ್ಕಳೊಂದಿಗೆ ಶಾಸ್ತ್ರೋಕ್ತವಾಗಿ ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾಮೀಜಿವರು ಅರುಣ್ ಮೊಂತೆಯೋ ಘರ್ ವಾಪಸಿಗೆ ತಾನಾಗಲೀ, ಹಿಂದೂ ಸಂಘಟನೆಗಳಾಗಲೀ ಯಾವುದೇ ಒತ್ತಡವನ್ನು ಹೇರಿಲ್ಲ. ಕ್ರೈಸ್ತ ಧರ್ಮದಲ್ಲಿ ಇರಲು ಇಚ್ಛಿಸದ ಅರುಣ್ ಕುಟುಂಬ ಮತ್ತೆ ಮಾತೃಧರ್ಮಕ್ಕೆ ಬಂದಿದ್ದು, ಆ ಕುಟುಂಬವನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆಸಿಕೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.