DAKSHINA KANNADA
ಹಂದಿಗಳ ನಿಗೂಢ ಸಾವು, ಕೊಯಿಲಾ ಗ್ರಾಮಸ್ಥರಿಗೆ ನಿತ್ಯ ತಲೆನೋವು….
ಪುತ್ತೂರು,ಜುಲೈ26: ಒಂದು ತಿಂಗಳಿನಿಂದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಯಿಲಾದಲ್ಲಿರುವ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಸುತ್ತ ನಡೆಯುತ್ತಿರುವ ಕಾಡು ಹಂದಿ ಹಾಗೂ ನಾಡು ಹಂದಿಗಳ ಸಾವು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಸುಮಾರು 40 ಕ್ಕೂ ಮಿಕ್ಕಿದ ಹಂದಿಗಳು ಈಗಾಗಲೇ ಸಾವಿಗೀಡಾಗಿದ್ದು, ಜಾನುವಾರು ಸಂವರ್ಧನಾ ಕೇಂದ್ರದಲ್ಲೂ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಗಾಳಿಯಿಂದ ಬಂದ ವೈರಸ್ ನಿಂದಾಗಿ ಈ ಸಾವುಗಳು ಸಂಭವಿಸುತ್ತಿದ್ದು, ಇದು ಮನುಷ್ಯನ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆಯೇ ಎನ್ನುವ ಚಿಂತೆಯಲ್ಲಿ ಈ ಊರಿನ ಜನರಿದ್ದಾರೆ.
ಕಳೆದ ಒಂದು ತಿಂಗಳಿನಿಂದೀಚೆಗೆ ಈ ಬೆಳವಣಿಗೆಗಳು ನಡೆಯುತ್ತಿದ್ದು, ಈ ಪ್ರದೇಶದಲ್ಲಿ ಹೆಚ್ಚಾಗಿರುವ ಕಾಡು ಹಂದಿಗಳು ನಿಗೂಢವಾಗಿ ಸಾವನ್ನಪ್ಪುತ್ತಿದ್ದು, ಇದಕ್ಕೆ ಏನು ಕಾರಣ ಎನ್ನುವ ಹುಡುಕಾಟದಲ್ಲಿ ಇದೀಗ ಈ ಭಾಗದ ಜನರಿದ್ದಾರೆ. ಕಾಡು ಹಂದಿಗಳನ್ನು ಹಿಡಿಯಲು ಕಿಡಿಗೇಡಿಗಳು ಮಾಡಿದ ಕುತಂತ್ರವೋ ಅಥವಾ ಬೇರೆ ಯಾವುದಾದರೂ ಹೊಸ ರೋಗವೋ ಎನ್ನುವ ಸಂಶಯ ಈ ಭಾಗದ ಜನರನ್ನು ಕಾಡುತ್ತಿದೆ. ಆದರೆ ಕೇವಲ ಕಾಡು ಹಂದಿಗಳಲ್ಲದೆ, ಜಾನುವಾರು ಸಂವರ್ಧನಾ ಕೇಂದ್ರದಲ್ಲಿರುವ ಹಂದಿ ತಳಿ ಸಂವರ್ಧನಾ ಘಟಕದಲ್ಲಿರುವ ಹಂದಿಗಳೂ ಸಾಯುತ್ತಿರುವುದು ಜನರ ಆತಂಕವನ್ನು ಮತ್ತೆ ಹೆಚ್ಚುವಂತೆ ಮಾಡಿದೆ. ಹಂದಿಗಳು ಈ ರೀತಿ ಸಾಯುತ್ತಿರುವ ಪ್ರಕ್ರಿಯೆಯನ್ನು ಗಮನಿಸಿದ ಜಾನುವಾರು ಸಂವರ್ಧನಾ ಕೇಂದ್ರದ ವೈದ್ಯರು ಸತ್ತ ಹಂದಿಗಳ ನಿರ್ಧಿಷ್ಟ ಅಂಗಗಳನ್ನು ಹೆಚ್ಚುವರಿ ತನಿಖೆಗಾಗಿ ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಿದ್ದಾರೆ. ಗಾಳಿಯ ಮೂಲಕ ಹರಡುತ್ತಿರುವಂತಹ ವೈರಸ್ ನಿಂದಾಗಿ ಈ ರೀತಿಯ ಹಂದಿಗಳ ಸಾವು ಸಂಭವಿಸುತ್ತಿದ್ದು, ಹಂದಿಯ ಗರ್ಭಕೋಶ ಹಾಗೂ ಉಸಿರಾಟದ ಮೇಲೆ ಈ ವೈರಸ್ ಗಳು ಪರಿಣಾಮವನ್ನು ಬೀರುತ್ತಿರುವ ಹಿನ್ನಲೆಯಲ್ಲಿ ಹಂದಿಗಳು ಸಾವನ್ನಪ್ಪುತ್ತಿದೆ ಎನ್ನುವ ವರದಿಯನ್ನು ವಿಜ್ಞಾನಿಗಳು ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ವೈರಸ್ ನಿಂದ ಮನುಷ್ಯನ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖವಾಗಿದೆ ಎನ್ನುವ ಮಾಹಿತಿಯನ್ನು ಮೂಲಗಳು ಸ್ಪಷ್ಟಪಡಿಸಿದ್ದರೂ, ಇದೀಗ ಜಾನುವಾರು ಕೇಂದ್ರದ ಹಂದಿ ತಳಿ ಸಂರಕ್ಷಣಾ ಘಟಕಕ್ಕೆ ಜನರ ಭೇಟಿಯನ್ನು ಎರಡು ತಿಂಗಳ ಮಟ್ಟಿಗೆ ನಿರ್ಬಂಧಿಸಲಾಗಿದೆ. ಈ ಬೆಳೆವಣಿಗೆ ಸ್ಥಳೀಯ ಜನರಲ್ಲಿ ಮತ್ತಷ್ಟು ಭಯವನ್ನುಂಟುಮಾಡಿದ್ದು, ಹಿರಿಯ ಅಧಿಕಾರಿಗಲು ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಬೇಕಿದೆ.