UDUPI
ಸ್ವಚ್ಛ ಉಡುಪಿ ಕ್ಷಣಗಣನೆ ಆರಂಭ- ಪ್ರಮೋದ್
ಉಡುಪಿ, ಆಗಸ್ಟ್ 16: ಉಡುಪಿ ಜಿಲ್ಲೆಯನ್ನು ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಕುರಿತಂತೆ ತಕ್ಷಣದಿಂದ ಕ್ಷಣಗಣನೆ ಆರಂಭಗೊಂಡಿದೆ ಎಂದು ರಾಜ್ಯ ಮೀನುಗಾರಿಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಅವರು ಬುಧವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಸ್ವಚ್ಛ ಉಡುಪಿ ಮಿಷನ್ ವರ್ಷದ ಕೌಂಟ್ ಡೌನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ ಅತಿ ಕಡಿಮೆ ಸಮಸ್ಯೆ ಇರುವ ಜಿಲ್ಲೆಗಳಲ್ಲಿ ಉಡುಪಿ ಒಂದಾಗಿದ್ದು, ಜಿಲ್ಲೆಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸಿದರೆ ಇಡೀ ದೇಶದಲ್ಲಿ ಸಮಸ್ಯೆ ಮುಕ್ತ ಜಿಲ್ಲೆಯಾಗಿ ಉಡುಪಿಯಾಗಲಿದೆ,
ಜಿಲ್ಲೆಯಲ್ಲಿ ಮರುಳುಗಾರಿಕೆಗೆ ಸಂಬಂದಿಸಿದಂತೆ 5 ರಿಂದ 10 ದಿನದಲ್ಲಿ ಸಮಸ್ಯೆ ಪರಿಹಾರವಾಗಲಿದ್ದು, ಇಡೀ ರಾಜ್ಯದಲ್ಲೇ ಅತೀ ಕಡಿಮೆ ದರದಲ್ಲಿ ಜಿಲ್ಲೆಯ ಜನರಿಗೆ ಮರಳು ಲಭ್ಯವಾಗಲಿದೆ,
ಜಿಲ್ಲೆಯ ಎಲ್ಲಾ ಗ್ರಾಮಾಂತರ ಪ್ರದೇಶಕ್ಕೆ ನರ್ಮ್ ಬಸ್ ಸೌಲಭ್ಯ ಒದಗಿಸಲಾಗುವುದು, ಯಾವುದೇ ಖಾಸಗಿ ಲಾಬಿಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ, ಜನರ ಹಿತದೃಷ್ಠಿಯಿಂದ ಜಿಲ್ಲಾಡಳಿತ ಕಾರ್ಯ ನಿರ್ವಹಿಸಲಿದೆ, 2018 ರ ಅಕ್ಟೋಬರ್ 2 ರಂದು ಉಡುಪಿ ಜಿಲ್ಲೆಯನ್ನು ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಕ್ರಮ ಕೈಗೊಂಡಿದ್ದು,
ಈ ಕುರಿತಂತೆ ವೆಲ್ಲೂರಿನ ಇಂಡಿಯನ್ ಗ್ರೀನ್ ಸರ್ವಿಸಸ್ ನ ಶ್ರೀನಿವಾಸನ್ ಅವರಿಂದ ತರಬೇತಿ ನೀಡಲಾಗಿದೆ, ಸಮರ್ಪಕವಾಗಿ ಕಸ ವಿಲೇವಾರಿ ಮಾಡುವ ಕುರಿತಂತೆ ನಿರ್ಲಕ್ಷ ಬೇಡ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಪರಿಸರ ಹಾಳಾಗುವುದರ ಜೊತೆಗೆ ಹಲವು ಕಾಯಿಲೆಗಳು ಕಂಡುಬರಲಿವೆ ಆದ್ದರಿಂದ ತ್ಯಾಜ್ಯ ವಿಲೇವಾರಿ ಮಾಡುವುದು ಜಿಲ್ಲೆಯ ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿ ಎಂದು ಸಚಿವರು ಹೇಳಿದರು.
ಇಂಡಿಯನ್ ಗ್ರೀನ್ ಸರ್ವಿಸಸ್‍ನ ವೆಲ್ಲೂರು ಶ್ರೀನಿವಾಸನ್ ಮಾತನಾಡಿ, ಉಡುಪಿ ಜಿಲ್ಲೆಯನ್ನು ಈಗಾಗಲೇ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿದ್ದು, ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡುವುದು ಕಷ್ಟವಲ್ಲ, ಇದಕ್ಕಾಗಿ ಜಿಲ್ಲೆಗೆ ಪ್ರತ್ಯೇಕ ಸೂತ್ರ ತಯಾರಿದ್ದು ಅದರಂತೆ ಕಾರ್ಯ ನಿರ್ವಹಿಸುವುದರ ಮೂಲಕ ಒಂದುವರ್ಷದ ಒಳಗೆ ಜಿಲ್ಲೆಯನ್ನು ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಜಿಲ್ಲೆಯ ಜನತೆ ಒಟ್ಟಾಗಿ ಶ್ರಮಿಸಿದರೆ ತ್ಯಾಜ್ಯ ಮುಕ್ತ ಜಿಲ್ಲೆ ಮಾಡುವುದು ಕಷ್ಟವಲ್ಲ, ಜಿಲ್ಲೆಯ ಪ್ರತಿ ಮನೆ ಮನೆಯಲ್ಲಿ ಕಸ ವಿಂಗಡ ಮಾಡುವ ಕುರಿತಂತೆ ಅರಿವು ಕಾರ್ಯಕ್ರಮ ಮೂಡಿಸಲಾಗುತ್ತಿದೆ, ಜನರಲ್ಲಿ ತ್ಯಾಜ್ಯ ವಿಲೇವಾರಿಯ ಬಗ್ಗೆ ಪ್ರವೃತ್ತಿ ಬೆಳೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ, ಶಶಿಕಾಂತ್ ಪಡುಬಿದ್ರೆ, ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಉಪಸ್ಥಿತರಿದ್ದರು.