UDUPI
ಸ್ಕೂಬಾ ಡೈವಿಂಗ್ ತಾಣವಾಗಲಿದೆ ಕಾಪು ಕಿನಾರೆ

ಉಡುಪಿ, ಜುಲೈ.19: ಕರಾವಳಿಯ ಈ ಜಿಲ್ಲೆ ಸದ್ಯದಲ್ಲೇ ಹೊಸ ಸಾಹಸ ಕ್ರೀಡೆಗೆ ತೆರೆದುಕೊಳ್ಳಲಿದೆ. ಮುಂದಿನ ಮೂರು ತಿಂಗಳಿನಿಂದ ಕಾಪು ಕಡಲ ಕಿನಾರೆಯಲ್ಲಿ ಸಾಹಸ ಕ್ರೀಡೆಯಾಗಿರುವ ಸ್ಕೂಬಾ ಡೈವಿಂಗ್ ಆರಂಭವಾಗಲಿದೆ.
ಕೋರಲ್ ರೀಫ್ ಎಂದು ಕರೆಯಲ್ಪಡುವ ಈ ದ್ವೀಪದ ಸಮೀಪ ತಜ್ಞರ ತಂಡದಿಂದ ಸರ್ವೇ ಕೂಡ ನಡೆದಿದೆ. ಹೊಸ ಸಾಹಸ ಕ್ರೀಡೆಗೆ ಗ್ರೀನ್ ಸಿಗ್ನಲ್ ಈಗಾಗಲೇ ಸಿಕ್ಕಿದೆ. ಕಾಪು, ಮಲ್ಪೆ ಬೀಚ್ ಪರಿಸರದಲ್ಲಿ ಸ್ಕೂಬಾ ಡೈವಿಂಗ್ ನಿಟ್ಟಿನಲ್ಲಿ ನೈಸರ್ಗಿಕ ಕೋರಲ್ ರೀಫ್ ಅನ್ವೇಷಣೆ ನಡೆದಿದ್ದು, ಕಾಪುವನ್ನೇ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು. ಮಲ್ಪೆಯಲ್ಲಿ ಸ್ಕೂಬಾ ಡೈವಿಂಗ್ ತರಬೇತಿ ಕೇಂದ್ರವನ್ನು ಆಯೋಜಿಸುವ ಯೋಜನೆಯಿದೆ. ಆ ಮೂಲಕ ಉಡುಪಿಯವರೇ ಆದ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಮುತುರ್ವಜಿಯಲ್ಲಿ ಉಡುಪಿಯನ್ನು ಪ್ರವಾಸೋದ್ಯಮ ಜಿಲ್ಲೆಯನ್ನಾಗಿ ಪರಿವರ್ತಿಸಲು ವಿಭಿನ್ನ ಪ್ರಯತ್ನ ನಡೆಯುತ್ತಿದೆ.


ಕಾಪು ಕಡಲಾಳದಲ್ಲಿ ಸ್ಕೂಬಾ ಡೈವಿಂಗ್ ಆಯೋಜಿಸುವ ಸಂಸ್ಥೆಗಾಗಿ ಇ-ಟೆಂಡರ್ ಕರೆಯಲಾಗಿದ್ದು, ಜು. 22 ಕೊನೆ ದಿನವಾಗಿದೆ. ಆಯೋಜಿಸುವ ಸಂಘಟಕರಿಗೆ ಹಲವು ಷರತ್ತುಗಳಿದ್ದು, ಸುರಕ್ಷೆ, ಆಮ್ಲಜನಕ ಸಿಲಿಂಡರ್, ಬೋಟ್, ತರಬೇತಿ ವ್ಯವಸ್ಥೆಯನ್ನೆಲ್ಲ ನೋಡಿದ ಆ ಬಳಿಕವಷ್ಟೇ ಅವರಿಗೆ ಅಧಿಕೃತ ಅನುಮತಿ ನೀಡಲಾಗುತ್ತದೆ. ಆ ಬಳಿಕ ಅದರ ಎಲ್ಲ ಜವಾಬ್ದಾರಿಯನ್ನು ಅವರೇ ನಿರ್ವಹಿಸಲಿದ್ದು, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಸ್ಕೂಬಾ ಡೈವಿಂಗ್‌ಗಾಗಿ 1 ಕೋಟಿ ರೂ. ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ನೆರವು ನೀಡಲಿದೆ.