DAKSHINA KANNADA
ಸೈನಿಕರ ವಿರುದ್ಧ ಅವಹೇಳನಕಾರಿ ಲೇಖನ, ಮಂಗಳೂರು ವಿ.ವಿ. ವಿರುದ್ಧ ಮಾಜಿ ಸೈನಿಕರಿಂದ ಕ್ರಮಕ್ಕೆ ಒತ್ತಾಯ..
ಪುತ್ತೂರು, ಅಗಸ್ಟ್ 12: ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರಥಮ ಬಿ.ಸಿ.ಎ ವಿದ್ಯಾರ್ಥಿಗಳಿಗೆ ನೀಡಲಾದ ಕನ್ನಡ ಪಠ್ಯ ಪುಸ್ತಕದಲ್ಲಿ ಸೈನಿಕರ ಅವಹೇಳನಕಾರಿ ಲೇಖನವನ್ನು ಪುತ್ತೂರು ಸೈನಿಕರ ಸಂಘ ಖಂಡಿಸಿದೆ. ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಹಾಗೂ ಮಾಜಿ ಸೈನಿಕ ಬ್ರಿಗೇಡಿಯರ್ ಜಿ.ಡಿ.ಭಟ್ ಇಂದೊಂದು ಅಕ್ಷಮ ಅಪರಾಧವಾಗಿದ್ದು, ಪುಸ್ತಕವನ್ನು ಪ್ರಕಟಿಸಿದ ವಿಶ್ವ ವಿದ್ಯಾನಿಲಯದ ಪಠ್ಯ ಪುಸ್ತಕ ಸಮಿತಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕೇವಲ ಕಾಲ್ಪನಿಕ ವಿಷಯವನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಬರೆದಿದ್ದು, ಆ ಲೇಖನವನ್ನು ವಿದ್ಯಾರ್ಥಿಗಳು ಓದುವಂತಹ ಪಠ್ಯ ಪುಸ್ತಕದಲ್ಲಿ ಪ್ರಕಟಿಸುವುದರ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಅವರು ವಿಶ್ವ ವಿದ್ಯಾನಿಲಯದ ಉದ್ಧೇಶವೇನು ಎನ್ನುವುದನ್ನು ಪ್ರಶ್ನಿಸಿದರು.
ಕೂಡಲೇ ವಿ.ವಿ ಈ ಪುಸ್ತಕವನ್ನು ಹಿಂಪಡೆಯಬೇಕು ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ತುಳಸೀದಾಸ್ ಯೋಧರನ್ನು ಈ ರೀತಿಯಲ್ಲಿ ಬಿಂಬಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸೈನ್ಯದ ಹಾಗೂ ಸೈನಿಕರ ಬಗ್ಗೆ ಇರುವ ಇಮೇಜನ್ನು ಕುಗ್ಗಿಸುವ ಪ್ರಯತ್ನ ನಡೆದಿದೆ. ಸೈನ್ಯಕ್ಕೆ ಸೇರುವ ಯುವಕರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದು, ಇಂಥಹ ಕಪೋಲಕಲ್ಪಿತ ಲೇಖನಗಳಿಂದ ಸೈನ್ಯಕ್ಕೆ ಸೇರುವ ಯುವಕರೂ ದೂರ ಸರಿಯುವ ಸಾಧ್ಯತೆಯೂ ಹೆಚ್ಚಾಗಿದೆ ಎಂದರು. ಈ ನಿಟ್ಟಿನಲ್ಲಿ ವಿಶ್ವ ವಿದ್ಯಾನಿಲಯ ಪಠ್ಯ ಪುಸ್ತಕವನ್ನು ಕೂಡಲೇ ಹಿಂಪಡೆಯಬೇಕೆಂದು ಅವರು ಒತ್ತಾಯಿಸಿದರು.