UDUPI
ಸೇತುವೆಗಳ ನಿರ್ಮಾಣಕ್ಕಾಗಿ 80 ಕೋಟಿ ವೆಚ್ಚ – ಪ್ರಮೋದ್
ಉಡುಪಿ, ಆಗಸ್ಟ್ 16: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 4 ವರ್ಷಗಳ ಅವಧಿಯಲ್ಲಿ ಸೇತುವೆಗಳ ನಿರ್ಮಾಣಕ್ಕಾಗಿ 80 ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗಿದೆ ಎಂದು ರಾಜ್ಯ ಮೀನುಗಾರಿಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಅವರು ಬುಧವಾರ ಕೊಡಂಕೂರುನಲ್ಲಿ ರೂ.50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.
ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳಂತೆ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಜನರ ಅನುಕೂಲಕ್ಕಾಗಿ ಹಲವು ಸೇತುವೆಗಳ ನಿರ್ಮಾಣ ಕಾಮಗಾರಿ ಕೈಗೊಂಡಿದ್ದು, 13 ಕೋಟಿ ವೆಚ್ಚದಲ್ಲಿ ಮೀಯಾರು- ಆವರ್ಸೆ ಸೇತುವೆ ಕಾಮಗಾರಿಗೆ ಮಂಜೂರಾತಿ , ಉಡುಪಿಯ ಕಲ್ಸಂಕ ಸೇತುವೆಯನ್ನು 1.25 ಕೋಟಿ ವೆಚ್ಚದಲ್ಲಿ ಅಗಲೀಕರಣ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ನಗರಸಭೆ ಸದಸ್ಯರಾದ ಜಾನಕಿ ಶೆಟ್ಟಿಗಾರ್, ಯುವರಾಜ್, ಶಾಂತಾರಾಮ್ ಸಲ್ವಾಂಕರ್, ಗಣೇಶ್ ನೇರ್ಗಿ, ಜನಾರ್ಧನ್ ಭಂಡಾರ್ಕರ್ , ಪೌರಾಯುಕ್ತ ಮಂಜುನಾಥಯ್ಯ, ನಗರಸಭೆಯ ಇಂಜಿನಿಯರ್ ಗಣೇಶ್ , ಸೇತುವೆಗೆ ಜಾಗ ನೀಡಿದ ಗೋಪಾಲ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.