UDUPI
ಸಾಲಿಗ್ರಾಮ ಪಟ್ಟಣ ಪಂಚಾಯತ್ – ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಕಾರ್ಯಾಗಾರ

ಸಾಲಿಗ್ರಾಮ ಪಟ್ಟಣ ಪಂಚಾಯತ್ – ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಕಾರ್ಯಾಗಾರ
ಉಡುಪಿ, ಸೆಪ್ಟೆಂಬರ್ 22 : ಸಾಲಿಗ್ರಾಮ ಪಟ್ಟಣ ಪಂಚಾಯತ್ ವತಿಯಿಂದ ‘ಘನ ಮತ್ತು ದ್ರವ ಸಂಪನ್ಮೂಲ’ ನಿರ್ವಹಣೆ (ಎಸ್.ಎಲ್.ಆರ್.ಎಂ) ಯೋಜನೆಯ ಕಾರ್ಯಾಗಾರವನ್ನು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರತ್ನಾ ನಾಗರಾಜ ಗಾಣಿಗ ಅವರು ಉದ್ಘಾಟಿಸಿದರು.
ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಇಂಡಿಯನ್ ಗ್ರೀನ್ ಸರ್ವೀಸ್ನ ಯೋಜನಾ ನಿರ್ದೇಶಕರಾದ ವೆಲ್ಲೂರು ಶ್ರೀನಿವಾಸನ್, ಪಟ್ಟಣ ಪಂಚಾಯತ್ನ ಮುಖ್ಯಾಧಿಕಾರಿ ಆರ್ ಶ್ರೀಪಾದ್ ಪುರೋಹಿತ್ ಮತ್ತು ಭಾಷಾ ಅನುವಾದಕವಾದ ಮಣೂರು ಪಡುಕೆರೆ ಸರಕಾರಿ ಪ್ರೌಢಶಾಲೆಯ ಅಧ್ಯಾಪಕರಾದ ಜಿ.ಶ್ರೀಧರ್ ಶಾಸ್ತ್ರಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಧ್ಯಕ್ಷರು ಇಂದು ಸ್ಥಳೀಯ ಸಂಸ್ಥೆಗಳಿಗೆ ಕಸದ ವಿಲೇವಾರಿ ದೊಡ್ಡ ಸಮಸ್ಯೆಯಗಿದ್ದು, ಈ ಹಿಂದೆ ತೆಗೆದುಕೊಂಡ ಉಪಕ್ರಮಗಳೆಲ್ಲ ತಾರ್ಕಿಕ ಅಂತ್ಯಕ್ಕೆ ಬಂದಿಲ್ಲ, ಮೂಲದಲ್ಲೆ ಕಸವನ್ನು ಬೇರ್ಪಡಿಸಿ ಧನಾತ್ಮಕವಾಗಿ ತ್ಯಾಜ್ಯವನ್ನು ಸಂಪನ್ಮೂಲ ಎಂದು ತಿಳಿದು, ಕಸಕ್ಕೆ ಮುಕ್ತಿ ಹಾಡಬೇಕಾಗಿದ್ದು, ಇದನ್ನು ಸಮರೋಪಾದಿಯಲ್ಲಿ ಮಾಡಲು ಪಟ್ಟಣ ಪಂಚಾಯತ್ನೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕಾಗಿದೆ, ಈ ನಿಟ್ಟಿನಲ್ಲಿ ಕಾರ್ಯಾಗಾರ ಹೆಚ್ಚು ಉಪಯುಕ್ತವಾಗಿದ್ದು, ಸ್ವಚ್ಛ ಸಾಲಿಗ್ರಾಮಕ್ಕೆ ನಾಂದಿಯಾಗಲಿ ಎಂದು ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾದ ಇಂಡಿಯನ್ ಗ್ರೀನ್ ಸರ್ವೀಸ್ನ ಯೋಜನಾ ನಿರ್ದೇಶಕರಾದ ವೆಲ್ಲೂರು ಶ್ರೀನಿವಾಸನ್ ಅವರು ಘನದ್ರವ ಸಂಪನ್ಮೂಲದ ಅಗತ್ಯತೆ, ಬೇರ್ಪಡಿಸುವಿಕೆ ಹಾಗೂ ಅದನ್ನು ಆರ್ಥಿಕ ಮೂಲವನ್ನಾಗಿ ಮಾಡುವ ಬಗ್ಗೆ ಪ್ರಾತ್ಯಕ್ಷತೆಯನ್ನು ನೀಡಿದರು. ಜಿ.ಶ್ರೀಧರ್ ಶಾಸ್ತ್ರಿ ಅವರು ಕನ್ನಡ ಅನುವಾದಗೈದರು.