UDUPI
ಸಾಲಿಗ್ರಾಮ- ಕ್ವಿಟ್ ಇಂಡಿಯಾ ಚಳುವಳಿ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ
ಉಡುಪಿ, ಆಗಸ್ಟ್ 8: ಕ್ವಿಟ್ ಇಂಡಿಯಾ ಚಳುವಳಿ 1942 ರ ಸಂಭ್ರಮಕ್ಕೆ 2017 ವಜ್ರ ಮಹೋತ್ಸವ ವರ್ಷದ ಅಂಗವಾಗಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು, ಪಟ್ಟಣ ಪಂಚಾಯತ್‍ನ ಎಲ್ಲಾ ಸದಸ್ಯರು, ಸಿಬ್ಬಂದಿಗಳು ಪೌರಕಾರ್ಮಿಕರು ಮತ್ತು ಪಾಂಚಜನ್ಯ ಸಂಘ-ಪಾರಂಪಳ್ಳಿ-ಹಂದಟ್ಟು ಇವರುಗಳ ಸಹಾಯದಿಂದ ಸಾಲಿಗ್ರಾಮ ಒಳಪೇಟೆಯ ರಸ್ತೆ ಸಿಂಡಿಕೇಟ್ ಬ್ಯಾಂಕ್ ಸಾಲಿಗ್ರಾಮ ಶಾಖೆಯ ಎದುರು, ಸಾಲಿಗ್ರಾಮದ ಮೀನು ಮಾರುಕಟ್ಟೆ ಸುತ್ತ ಮುತ್ತ ಹಾಗೂ ಪಟ್ಟಣ ಪಂಚಾಯತ್ ಕಚೇರಿಯ ಸಮೀಪ ಶ್ರಮದಾನದ ಮೂಲಕ ಸ್ವಚ್ಚತೆಯನ್ನು ಮಾಡಲಾಯಿತು.
ಇದಕ್ಕೆ ಮೊದಲು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರತ್ನಾ ನಾಗರಾಜ ಗಾಣಿಗರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆದಿತ್ತು. ಪಟ್ಟಣ ಪಂಚಾಯತ್ ಸಿಬ್ಬಂದಿ ಕೆ.ಚಂದ್ರಶೇಖರ್ ಸೋಮಯಾಜಿಯವರು ಪ್ರಾಸ್ತಾವಿಕ ಭಾಷಣ ಮಾಡಿ ದಿನದ ವಿಶೇಷತೆಯನ್ನು ಸಭೆಗೆ ತಿಳಿಸಿದರು.
ನಾಮನಿರ್ದೇಶನ ಸದಸ್ಯರಾದ ಕೆ ಅಚ್ಚುತ ಪೂಜಾರಿಯವರು ಸ್ವಚ್ಛತೆಯ ಮಹತ್ವ, ಉಡುಪಿ ಜಿಲ್ಲೆ ತ್ಯಾಜ್ಯ ಮುಕ್ತ ಜಿಲ್ಲೆ ಎಂಬ ಘೋಷಣೆಯಲ್ಲಿನ ಭಾದ್ಯತೆಗಳನ್ನು ತಿಳಿಸಿದರು. ಮುಖ್ಯಾಧಿಕಾರಿ ಶ್ರೀಪಾದ್ ಪುರೋಹಿತ್ ಹಾಗೂ ಅಧ್ಯಕ್ಷರಾದ ರತ್ನಾ ನಾಗರಾಜ ಗಾಣಿಗ ಅವರು ಸಮಯೋಚಿತವಾಗಿ ಮಾತನಾಡಿದರು. ಸಭೆಯಲ್ಲಿ ಪಾಂಚಜನ್ಯ ಸಂಘದ ಅಧ್ಯಕ್ಷರಾದ ಕೃಷಮೂರ್ತಿ ಮರಕಾಲ, ಉಪಾಧ್ಯಕ್ಷರಾದ ಕೃಷ್ಣ ಆಚಾರ್ಯ, ಖಜಾಂಚಿ ಯೋಗೀಶ್ ಕುಮಾರ್ ಮತ್ತು ಸದಸ್ಯರು ಉಪಸ್ಥಿತರಿದ್ದರು.