DAKSHINA KANNADA
ಸಾಮರಸ್ಯ ನಡಿಗೆ, ನೋಚಾನ್ಸ್ ಫಾರ್ ಬಿಜೆಪಿ ಪಿಎಫ್ಐ
ಮಂಗಳೂರು, ಆಗಸ್ಟ್ 29 : ಜಿಲ್ಲೆಯಲ್ಲಿ ಸಾಮರಸ್ಯ ನಡಿಗೆ ಮಾಡುತ್ತೇವೆ ಆದರೆ ನೋಚಾನ್ಸ್ ಫಾರ್ ಬಿಜೆಪಿ ಪಿಎಫ್ಐ ಎಂದಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯಕ್ಕೆ ಧಕ್ಕೆಯಾಗಿದೆ. ಜಿಲ್ಲೆಯಲ್ಲಿ ಶಾಂತಿ -ಸಾಮರಸ್ಯ ನೆಲೆಸುವುದಕ್ಕಾಗಿ ಸಾಮರಸ್ಯ ನಡಿಗೆ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಹೇಳಿದ್ದಾರೆ.ಮಂಗಳೂರಿನ ಸರ್ಕಿಟ್ ಹೌಸಿನಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಸೆಪ್ಟೆಂಬರ್ 12 ರಂದು ಬಂಟ್ವಾಳದ ಫರಂಗಿಪೇಟೆಯಿಂದ ಮಾಣಿವರೆಗೆ ಸಾಮರಸ್ಯ ನಡಿಗೆ ಆಯೋಜಿಸಲಾಗಿದೆ ಎಂದು ಸಚಿವರು ನುಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ನಡೆಯುತ್ತಿರುವುದು ಪೂರ್ವ ನಿಯೋಜಿತ ಕೃತ್ಯಗಳು. ನಾನು ವಿದ್ಯಾರ್ಥಿಯಾಗಿದ್ದಾಗ ಜಿಲ್ಲೆಯಲ್ಲಿ ಸಾಮರಸ್ಯ ಇತ್ತು. ಈಗ ವಿದ್ಯಾರ್ಥಿ ಸಂಘಟನೆಗಳು ಮತೀಯವಾದಿಗಳಾಗುತ್ತಿವೆ. ನಂಬಿಕೆಯ ಹೆಸರಲ್ಲಿ ಹಿಂಸಾಚಾರಗಳು ನಡೆಯುತ್ತಿವೆ.ಪ್ರಧಾನಿ ನರೇಂದ್ರ ಮೋದಿಯವರು ನಂಬಿಕೆ ನೆಲೆಯಲ್ಲಿನ ಹಿಂಸೆ ಸಹಿಸುವುದಿಲ್ಲ ಎಂದಿದ್ದಾರೆ. ಈ ಪ್ರಶ್ನೆಯನ್ನು ಅವರ ಇಲ್ಲಿನ ಶಿಷ್ಯರಲ್ಲೇ ಕೇಳಬೇಕಾಗಿದೆ ಎಂದ ಸಚಿವರು ಈ ಹಿನ್ನೆಲೆಯಲ್ಲಿ ಶಾಂತಿ ನೆಲೆಸುವುದಕ್ಕಾಗಿ ಸಾಮರಸ್ಯ ನಡಿಗೆ ಮಾಡುತ್ತೇವೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವನಾಗಿ ಎಲ್ಲರಿಗೂ ಈ ಸಾಮರಸ್ಯ ನಡಿಗೆಯಲ್ಲಿ ಭಾಗವಹಿಸಲು ಕರೆ ಕೊಡುತ್ತಿದ್ದೇನೆ.ಧಾರ್ಮಿಕ ನಾಯಕರು, ಶಾಂತಿಪ್ರಿಯರು ಇದರಲ್ಲಿ ಕೈಜೋಡಿಸಬೇಕು. ಆದರೆ ಹತ್ಯೆ, ಗಲಭೆ, ಆಶಾಂತಿಗಳಿಗೆ ಕಾರಣವಾಗಿದ್ದ ಬಿಜೆಪಿ, ಪಿಎಫ್ಐ ಗಳಿಗೆ ಇಲ್ಲಿ ಅವಕಾಶವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸ್ಪಷ್ಟಪಡಿಸಿದ್ದಾರೆ. ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್, ಮಮತಾ ಗಟ್ಟಿ, ಶಶಿಧರ ಹೆಗ್ಡೆ, ಎ ಸಿ ಭಂಡಾರಿ ಮತ್ತಿತರ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಟಿಯಲ್ಲಿದ್ದರು.