UDUPI
ಸಖಿ ಒನ್ ಸ್ಟಾಪ್ ಸೆಂಟರ್ ಉದ್ಘಾಟನೆ ಶೀಘ್ರ- ಜಿಲ್ಲಾಧಿಕಾರಿ

ಸಖಿ ಒನ್ ಸ್ಟಾಪ್ ಸೆಂಟರ್ ಉದ್ಘಾಟನೆ ಶೀಘ್ರ- ಜಿಲ್ಲಾಧಿಕಾರಿ
ಉಡುಪಿ, ಸೆಪ್ಟೆಂಬರ್ 20 : ಉಡುಪಿಯಲ್ಲಿ ನಿರ್ಮಾಣವಾಗುತ್ತಿರುವ ಸಖಿ ಒನ್ ಸ್ಟಾಪ್ ಸೆಂಟರ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಶೀಘ್ರದಲ್ಲಿ ಉದ್ಘಾಟನೆಯಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಗಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಡುಪಿಯಲ್ಲಿ ನಿರ್ಮಾಣವಾಗುತ್ತಿರುವ ಸಖಿ ಒನ್ ಸ್ಟಾಪ್ ಸೆಂಟರ್ ಕಟ್ಟಡ ಕಾಮಗಾರಿಗಾಗಿ 37.68 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ ಕಟ್ಟಡದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಕಟ್ಟಡದ ವಿದ್ಯುದೀಕರಣ ಸೇರಿದಂತೆ ಸ್ವಲ್ಪ ಪ್ರಮಾಣದ ಕೆಲಸ ಬಾಕಿ ಇದ್ದು, ಈ ಕೆಲಸವನ್ನು ಶೀಘ್ರದಲ್ಲಿ ಮುಗಿಸುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಶೀಘ್ರದಲ್ಲಿ ಕಟ್ಟಡ ಉದ್ಘಾಟನೆ ಅಗತ್ಯ ಕ್ರಮಗಳನ್ನು ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ವಾಲ್ವಿಸ್ ರವರಿಗೆ ಸೂಚಿಸಿದರು.

ಜಿಲ್ಲೆಯ ಮಹಿಳಾ ನಿಲಯದಲ್ಲಿರುವ ಹೊರ ರಾಜ್ಯದ ಮಹಿಳೆಯರ ವಿಳಾಸವನ್ನು ಪತ್ತೆ ಹಚ್ಚುವ ಕುರಿತಂತೆ, ಮಹಿಳೆಯರ ಸಂಬಂದಪಟ್ಟ ರಾಜ್ಯದ ರಾಜಧಾನಿಗಳ ಪೊಲೀಸ್ ಕಂಟ್ರೋಲ್ ರೂಂ ಗಳಿಗೆ ಭಾವಚಿತ್ರ ಹಾಗೂ ಗುರುತಿನ ಚಹರೆಯ ಸಹಿತ, ಸಂಬಂದಪಟ್ಟವರ ವಿಳಾಸ ಪತ್ತೆ ಹಚ್ಚುವ ಕುರಿತಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಮಹಿಳಾ ನಿಲಯದಲ್ಲಿರುವ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿ, ಅವರಿಂದ ಬಟ್ಟೆ ಬ್ಯಾಗ್ ಗಳನ್ನು ತಯಾರಿಸುವ ಮೂಲಕ ಅವರಿಗೆ ಆರ್ಥಿಕ ಸಂಪಾದನೆಗೆ ಅವಕಾಶ ಒದಗಿಸುವಂತೆ ಸೂಚಿಸಿದರು.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಪೊಲೀಸ್ ಠಾಣೆಗಳಲ್ಲಿ ಶೀಘ್ರದಲ್ಲಿ ದಾಖಲಿಸುವಂತೆ ಹಾಗೂ ಎಫ್.ಐ.ಆರ್ ಪ್ರತಿ ಹಾಗೂ ವೈದ್ಯಕೀಯ ವರದಿಯ ಪ್ರತಿಯನ್ನು ಮಹಿಳಾ ಸಾಂತ್ವನ ಕೇಂದ್ರಗಳಿಗೆ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ ಜಿಲ್ಲಾಧಿಕಾರಿ ರಾಜ್ಯ ಅಥವಾ ಕೇಂದ್ರ ಸರ್ಕಾರದ ನೌಕರಿಯಲ್ಲಿರುವ ಮಹಿಳೆಯರು ತಮ್ಮ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳನ್ನು ನೇರವಾಗಿ ಸಂಬಂದಪಟ್ಟ ಪೊಲೀಸ್ ಠಾಣೆಯಲ್ಲಿ ದಾಖಲಿಸಬಹುದು ಎಂದು ಹೇಳಿದರು.
ತಂಬಾಕು ಹಾಗೂ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತಂತೆ ಶಾಲಾ ಕಾಲೇಜುಗಳ ಪರಿಸರದಲ್ಲಿ ಪೊಲೀಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರದೊಂದಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮಹಿಳಾ ಸಾಂತ್ವನ ಯೋಜನೆ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ, ವರದಕ್ಷಿಣೆ ನಿಷೇಧ ಕಾಯ್ದೆ, ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕ ತಡೆ ಸೇರಿದಂತೆ ಮಹಿಳೆ ಮತ್ತು ಮಕ್ಕಳ ವಿರುದ್ದ ನಡೆಯುವ ದೌರ್ಜನ್ಯ ತಡೆಗಟ್ಟುವ ಕುರಿತಂತೆ ಇರುವ ಕಾನೂನುಗಳು, ಅವುಗಳ ಅನುಷ್ಠಾನ ಕುರಿತಂತೆ, ಜಿಲ್ಲೆಯ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳು ಹಾಗೂ ಎಲ್ಲಾ ಅನುಷ್ಠಾನ ಅಧಿಕಾರಿಗಳಿಗೆ ಪ್ರತ್ಯೇಕವಾದ ಕಾರ್ಯಗಾರ ಏರ್ಪಡಿಸಿ, ಸಮಗ್ರ ಮಾಹಿತಿ ನೀಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಏಪ್ರಿಲ್ 17 ರಿಂದ ಇದವರೆಗೆ ಸಾಂತ್ವ ಯೋಜನೆಯಡಿ 379 ಪ್ರಕರಣಗಳಲ್ಲಿ 115 ಪ್ರಕರಣ ಇತ್ಯರ್ಥಪಡಿಸಿದ್ದು, 236 ಸಮಾಲೋಚನೆ ಹಂತದಲ್ಲಿವೆ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆಯಡಿ 208 ಪ್ರಕರಣ ದಾಖಲಾಗಿದ್ದು, 180 ಇತ್ಯರ್ಥಪಡಿಸಲಾಗಿದೆ, ವರದಕ್ಷಿಣೆ ನಿಷೇಧ ಕಾಯ್ದೆಯಡಿ 1 ಪ್ರಕರಣ ದಾಖಲಾಗಿದ್ದು, ತನಿಖಾ ಹಂತದಲ್ಲಿದೆ, ಸ್ಥೈರ್ಯ ನಿಧಿ ಯೋಜನೆಯಲ್ಲಿ 6 ಪ್ರಕರಣಗಳಿಗೆ 1.50 ಲಕ್ಷ ತುರ್ತು ಪರಿಹಾರ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ವಾಲ್ವಿಸ್ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಅಧಿಕರಿಗಳು ಹಾಗೂ ವಿವಿಧ ಸ್ವಯಂ ಸೇವಾ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.